ಸುದ್ದಿ ಕನ್ನಡ ವಾರ್ತೆ

ಮಂಗಳೂರು ಪ್ರಚೋದನಾಕಾರಿ ಭಾಷಣ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ S D P I ಮುಖಂಡನಿಗೆ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ಬೆಳ್ತಂಗಡಿ ನ್ಯಾಯಾಲಯ ತೀರ್ಪು ನೀಡಿದೆ.

 

2015ರ ಜುಲೈ 23ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಪಾಪ್ಯುಲ್ಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಬೆಳ್ತಂಗಡಿ ವಲಯದ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಹಮ್ಮದ್ ರಿಯಾಜ್ ಫರಂಗಿಪೇಟೆ ಅವರು ಪ್ರಚೋದನಾಕಾರಿ ಭಾಷಣ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 315/2015ರಡಿ ಭಾರತೀಯ ದಂಡ ಸಂಹಿತೆಯ ಕಲಂ 153(ಎ) ಹಾಗೂ 295(ಎ)ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

 

ಪ್ರಕರಣದ ತನಿಖೆಯನ್ನು ಅಂದಿನ ಪೊಲೀಸ್ ಉಪನಿರೀಕ್ಷಕ ಹಾಗೂ ತನಿಖಾಧಿಕಾರಿ ರವಿ ಬಿ.ಎಸ್. ನಡೆಸಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಮಲಿಂಗಪ್ಪ ಅವರು ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ಭಾರತೀಯ ದಂಡ ಸಂಹಿತೆಯ ಕಲಂ 153(ಎ) ಅಡಿಯಲ್ಲಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಆಶೀತಾ ಅವರು ವಾದ ಮಂಡಿಸಿದರು.