ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ವಾಹನಗಳ ಸಂಚಾರ ನಿಯಮ ಉಲ್ಲಂಘನೆ ನಿಯಂತ್ರಿಸಲು ಸರ್ಕಾರವು  AI ಆಧಾರಿತ ಕ್ಯಾಮರಾಗಳನ್ನು ರಾಜ್ಯದ 26 ಸ್ಥಳಗಳಲ್ಲಿ ಅಳವಡಿಸಿದೆ. ಇದೀಗ ಅಗಷ್ಟ 1 ರಿಂದ ನಿಯಮ ಉಲ್ಲಂಘಿಸುವವರಿಗೆ ಸ್ವಯಂಚಾಲಿತ  E- ಚನಲ್ ನೀಡುವ ವ್ಯವಸ್ಥೆ ಸಂಪೂರ್ಣವಾಗಿ ಆರಂಭಗೊಂಡಿದೆ. ಇದರಿಂದಾಗಿ ಇನ್ನು ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಭಾರಿ ದಂಡ ಬೀಳಲಿದೆ.

ಗೋವಾ ರಾಜ್ಯ ಸರ್ಕಾರವು ಕಳೆದ ಸುಮಾರು ಒಂದು ತಿಂಗಳ ಹಿಂದೆಯೇ ರಾಜ್ಯದ ವಿವಿಧ ಜಂಕ್ಷನ್ ಗಳಲ್ಲಿ  AI ಕ್ಯಾಮರಾ ಅಳವಡಿಸಿದ್ದರೂ ಕೂಡ ಆರಂಭದಲ್ಲಿ ಸಾರ್ವಜನಿಕ ಜಾಗೃತಿ ಅಭಿಯಾನದ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಕೇವಲ ಎಚ್ಚರಿಕೆಯ ಸಂದೇಶ ಮಾತ್ರ ಬರುತ್ತಿತ್ತು. ಇದೀಗ ಅಗಷ್ಟ 1 ರಿಂದ ಎಐ ಕ್ಯಾಮರಾ ಮೂಲಕ ನಿಯಮ ಉಲ್ಲಂಘಿಸಿದವರಿಗೆ ಸ್ವಯಂಚಾಲಿತವಾಗಿ ಎಐ ಕ್ಯಾಮರಾ ಮೂಲಕ ದಂಡ ವಿಧಿಸಲಾಗುತ್ತಿದೆ.

ಗೋವಾ ರಾಜ್ಯದಲ್ಲಿ ಮೊದಲ ಹಂತದಲ್ಲಿ 26 ಜಂಕ್ಷನ್ ಗಳಲ್ಲಿ  AI  ಕ್ಯಾಮರಾಗಳನ್ನು ಅಳವಡಿಸಲಾಗಿದೆ. ವಾಹನ ಓಡಿಸುವಾಗ ಮೊಬೈಲ್ ಬಳಸುವುದು, ಹೆಲ್ಮೆಟ್ ಧರಿಸದಿರುವುದು, ಸೀಟ್ ಬೆಲ್ಟ ಹಾಕದಿರುವುದು, ಅತೀ ವೇಗ, ಅಪಾಯಕಾರಿ ಓವರ್ ಟೇಕಿಂಗ್, ತಪ್ಪು ಬದಿಯಲ್ಲಿ ವಾಹನ ಓಡಿಸುವುದು, ಅನಧೀಕೃತ ಪಾರ್ಕಿಂಗ್, ಅಂಬುಲೆನ್ಸ ಮತ್ತು ಅಗ್ನಿಶಾಮಕ ದಳದ ವಾಹನಗಳಿಗೆ ದಾರಿಕೊಡದಿರುವುದು, ಬೈಕ್ ನಲ್ಲಿ ಇಬ್ಬರಿಗಿಂತ ಹೆಚ್ಚು ಜನರು ಸವಾರಿ ಮಾಡುವುದು, ಸರಕು ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು, ಅಲಂಕಾರಿಕ ಮತ್ತು ಅನಧೀಕೃತ ನಂಬರ ಪ್ಲೇಟ್ ಹೊಂದಿರುವುದು, ಹೀಗೆ ಹತ್ತು ಹಲವು ನಿಯಮ ಉಲ್ಲಂಘನೆಗಳಿಗೆ ಎಐ ಕ್ಯಾಮರಾ ಸ್ವಯಂಚಾಲಿತವಾಗಿ ದಂಡ ವಿಧಿಸಲು ಪ್ರಾರಂಭಿಸಿದೆ.