ಸುದ್ದಿ ಕನ್ನಡ ವಾರ್ತೆ
ಜೊಯಿಡಾ:ತಾಲೂಕಿನ ಗುಂದ ವನ್ಯಜೀವಿ ವಲಯ ಅರಣ್ಯಾಧಿಕಾರಿ ನೀಲಕಂಠ ದೇಸಾಯಿ ಅವರು ಸುದೀರ್ಘ 40 ವರ್ಷಗಳ ಯಶಸ್ವಿ ಸೇವೆ ಸಲ್ಲಿಸಿ ನಾಳೆ (ಜುಲೈ 31) ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಸಹೋದ್ಯೋಗಿಗಳು ಅವರಿಗೆ ಇಂದು ಹಾರ್ದಿಕವಾಗಿ ಬೀಳ್ಕೊಟ್ಟಿದ್ದಾರೆ
ವಿಶೇಷವೆಂದರೆ, ಇದೇ ಭಾಗದಲ್ಲಿ ಅರಣ್ಯ ಇಲಾಖೆಯ ಗಾರ್ಡ್ ಆಗಿ ಸೇವೆ ಸಲ್ಲಿಸಿ ತಮ್ಮ ಪ್ರಾಮಾಣಿಕ ಸೇವೆಯಿಂದಾಗಿ ಹಂತ ಹಂತವಾಗಿ ಬಡ್ತಿ ಪಡೆದು, ಸದ್ಯ ಇದೇ ಗುಂದ ವಲಯದ ಅರಣ್ಯಾಧಿಕಾರಿಯಾಗಿ (RFO) ಸೇವೆ ಸಲ್ಲಿಸಿ ಜೂಲೈ 31ರಂದು ನಿವೃತ್ತಿ ಹೊಂದುತ್ತಿದ್ದಾರೆ
ನಾಳೆ ನಿವೃತ್ತರಾಗಲಿರುವ ನೀಲಕಂಠ ದೇಸಾಯಿ ಅವರು ಕೇವಲ ಸರ್ಕಾರಿ ಅಧಿಕಾರಿಯಾಗಿ ಕೆಲಸ ಮಾಡಲಿಲ್ಲ. ಅವರು ಅಧಿಕಾರಿ ಎನ್ನುವುದಕ್ಕಿಂತ ಹೆಚ್ಚಾಗಿ ಊರಿನ ಜನರಲ್ಲಿ ಒಬ್ಬರಂತೆ ಬೆರೆತು ಹೋಗಿದ್ದರು ಎಂದು ಗ್ರಾಮಸ್ಥರು ಸ್ಮರಿಸಿದ್ದಾರೆ. ತಮ್ಮ ಇಡೀ ಸೇವಾ ಅವಧಿಯಲ್ಲಿ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಇವರು, ಅರಣ್ಯ ಸಂರಕ್ಷಣೆಯ ಜೊತೆಗೆ ಸ್ಥಳೀಯರ ಸಮಸ್ಯೆಗಳಿಗೆ ಸದಾ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದರು ಎಂದು ಜನರು ಹೇಳುತ್ತಾರೆ.
ಕಾರ್ಯಕ್ರಮದಲ್ಲಿ ಭಾಗವಹಿದ ನಂದಿಗದ್ದೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್. ವಿ. ದಾನಗೇರಿ, ಮತ್ತು ನಂದಿಗದ್ದೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅರುಣ್ ದೇಸಾಯಿ ಅವರುಗಳು “ನೀಲಕಂಠ ದೇಸಾಯಿ ಅವರ ಧಾರ್ಮಿಕ ಮತ್ತು ಸಾಮಾಜಿಕ ಸೇವೆ ಅನನ್ಯವಾದುದು ಎಂದು ಅವರ ಸೇವೆಯನ್ನು ಸ್ಮರಿಸಿದ್ದಾರೆ.
ಈ ಸಂದರ್ಭದಲ್ಲಿ ಭಾವುಕರಾಗಿ ಮಾತನಾಡಿದ ನೀಲಕಂಠ ದೇಸಾಯಿ ಅವರು ನಾನು ಕರ್ತವ್ಯದಲ್ಲಿ ಇದ್ದಾಗ ಸಹಕಾರ ನೀಡಿದ ಎಲ್ಲರನ್ನು ನೆನೆದು, ಕಲಿತು ಅಧಿಕಾರಿಯಾದ ಬಗ್ಗೆ ವಿವರಿಸಿ ಅಮ್ಮ ಹಾಗೂ ತನ್ನ ಮಾವ ಬಹಳಷ್ಟು ಕಷ್ಟ ಪಟ್ಟು ತನಗೆ ಶಿಕ್ಷಣ ನೀಡಿದ್ದರಿಂದ ನಾನೋಬ್ಬ ಒಳ್ಳೆಯ ಅಧಿಕಾರಿಯಾಗಲು ಸಾಧ್ಯವಾಯಿತು ಎಂದರು.
ಈ ಮೊದಲು ತಮ್ಮ ಸೇವಾ ಅವಧಿಯಲ್ಲಿ ನಂದಿಗದ್ದೆಯ ಮಾರುತಿ ಮಂದಿರದ ಬಳಿ ನಾಗಪುಪ್ಪ ಗಿಡವನ್ನು ನೀಲಕಂಠ ದೇಸಾಯಿ ಅವರು ನೆಟ್ಟು, ಗುಂದ ಪ್ರೌಢಶಾಲೆಗೆ ನೀರಿನ ಟ್ಯಾಂಕ್ ದೇಣಿಗೆ ನೀಡಿದರು.
ಗುಂದ ವಲಯದ ವಿವಿಧ ಗ್ರಾಮಗಳ ಪ್ರಮುಖರು ಹಾಗೂ ಸಾರ್ವಜನಿಕರು ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ವಲಯ ಅರಣ್ಯಾಧಿಕಾರಿ ಗಳಾದ ರಾಮು ಗೌಡ, ರವಿಕಿರಣ ಸಂಪಗಾವಿ, ಡಿ ಆರ್ ಎಪ್ ಓ ಗಳಾದ ವಿಠ್ಠಲ ಗುಬ್ಬಚ್ಚಿ,ದಯಾನಂದ ಎಮ್, ಕೃಷಿಕ ಸಮಾಜದ ಜಿಲ್ಲಾ ಸದಸ್ಯ ಆರ್ ಆರ್ ಹೆಗಡೆ,ಇತರರು ಇದ್ದರು. ಅಮರ ಭಾಗ್ವತ್ ಕಾರ್ಯಕ್ರಮವನ್ನು ನಿರೂಪಿಸಿದರು.
