ಸುದ್ದಿ ಕನ್ನಡ ವಾರ್ತೆ
​ಶಿರಸಿ: ತಾಲೂಕಿನ ಅಜ್ಜಬಳ ಗ್ರಾಮದ ಬಳಿ ಶಿರಸಿ-ಸಿದ್ದಾಪುರ ರಸ್ತೆಯಲ್ಲಿ ಎರಡು ಮೋಟಾರ್ ಸೈಕಲ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಯುವಕನೊಬ್ಬ ಮೃತಪಟ್ಟು, ಮತ್ತಿಬ್ಬರು ತೀವ್ರ ಗಾಯಗೊಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
​ಸಿದ್ದಾಪುರ ತಾಲೂಕಿನ ಕೊಡ್ಸರ ಮುಟ್ಟಳ್ಳಿಯ ನಿವಾಸಿ ಸಿಂಧೂರ ಸದಾನಂದ ಹೆಗಡೆ (21) ಮೃತಪಟ್ಟ ಬೈಕ್ ಸವಾರ.

​ಶುಕ್ರವಾರ ರಾತ್ರಿ ಸುಮಾರು 9:15 ರ ವೇಳೆಗೆ ಸಿಂಧೂರ ಹೆಗಡೆ ಅವರು ಶಿರಸಿಯಿಂದ ಸಿದ್ದಾಪುರ ಕಡೆಗೆ ತಮ್ಮ ಮೋಟಾರ್ ಸೈಕಲ್‌ನಲ್ಲಿ ತೆರಳುತ್ತಿದ್ದರು. ಅದೇ ಸಮಯದಲ್ಲಿ ಸಿದ್ದಾಪುರ ಕಡೆಯಿಂದ ಶಿರಸಿ ಕಡೆಗೆ ಸರಕುಳಿಯ ಗಿರೀಶ ರಾಮ ಗೌಡ (26) ಎಂಬಾತ ಮತ್ತೊಬ್ಬ ಹಿಂಬದಿ ಸವಾರನೊಂದಿಗೆ ಬೈಕ್‌ನಲ್ಲಿಬರುತ್ತಿದ್ದಾಗ, ಅಜ್ಜಬಳ ಗ್ರಾಮದ ಬಳಿ ಎರಡೂ ವಾಹನಗಳು ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿ ಮುಖಾಮುಖಿ ಢಿಕ್ಕಿಯಾಗಿದೆ.
​ಅಪಘಾತದ ಭೀಕರತೆಗೆ ಎರಡೂ ಬೈಕ್‌ಗಳು ರಸ್ತೆಯ ಮೇಲೆ ಬಿದ್ದು, ಸಿಂದೂರ ಹಾಗೂ ಬಲಗಾಲಿಗೆ ತೀವ್ರ ಪೆಟ್ಟುಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಮತ್ತೊಂದು ಬೈಕ್‌ನ ಸವಾರ ಗಿರೀಶ ಹಾಗೂ ಹಿಂಬದಿ ಸವಾರನಿಗೆ ಬಲಗೈ ಮತ್ತು ಬಲಗಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಅಪಘಾತದಲ್ಲಿ ಎರಡೂ ವಾಹನಗಳು ಜಖಂಗೊಂಡಿವೆ.

​ಈ ಕುರಿತು ಕೊಡ್ಸರ ಮುಟ್ಟುಳ್ಳಿಯ ಮಹೇಶ ವೆಂಕಟರಮಣ ಹೆಗಡೆ ನೀಡಿರುವ ದೂರಿನನ್ವಯ ಶಿರಸಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.