ಸುದ್ದಿ ಕನ್ನಡ ವಾರ್ತೆ

ಗೋಕರ್ಣದ ಶ್ರೀ ಮಹಾಗಣಪತಿ ದೇವರ ಮೂರ್ತಿ ಸವಕಳಿಯಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಸಾರ್ವಜನಿಕ ಪೂಜೆ ಹಾಗೂ ಪ್ರವೇಶವನ್ನು ಇಂದಿನಿಂದ ನಿಷೇಧಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ  ಕೈಗೊಂಡ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಸಿದ ಬಳಿಕ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಕೇವಲ ಮಹಾಗಣಪತಿಯ ದರ್ಶನ ಮಾತ್ರ ಲಭಿಸಲಿದೆ.

ಗೋಕರ್ಣದ ಮಹಾಗಣಪತಿಯ ಭುಜ ಮತ್ತು ಎದೆಯ ಭಾಗ ಹೆಚ್ಚಿನ ಪ್ರಮಾಣದಲ್ಲಿ ಸವಕಳಿಯಾಗುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಸಾರ್ವಜನಿಕರು ದೇವರ ಮೂರ್ತಿಯನ್ನು ಮುಟ್ಟುವುದು , ಪೂಜೆ ಅಭಿಷೇಕ ಮಾಡುವುದಕ್ಕೂ ಕೂಡ ನಿರ್ಬಂಧ ಹೇರಲಾಗಿದೆ. ಇಷ್ಟೇ ಅಲ್ಲದೆ ವಿಐಪಿ ದರ್ಶನ ಪೂಜೆ ಕೂಡ ಬಂದ್ ಮಾಡಲಾಗಿದೆ. ಸಂಕಷ್ಟಿ ಮತ್ತು ಚತುರ್ಥಿಯಲ್ಲಿ ಕೂಡ ಇದೇ ನಿಯಮ ಮುಂದುವರೆಯಲಿದೆ.