ಸುದ್ದಿ ಕನ್ನಡ ವಾರ್ತೆ
ಸಿದ್ದಾಪುರ: ಯಾವ ನದಿ ಕೋಟ್ಯಂತರ ಜೀವಿಗಳಿಗೆ ತಾಯಿಯಾಗಿ ಜೀವದಾತೆಯಾಗಬೇಕಿತ್ತೋ, ಇಂದು ಅದೇ ನದಿಯ ಒಡಲು ಜಲಚರಗಳ ಪಾಲಿಗೆ ಸ್ಮಶಾನವಾಗಿ ಮಾರ್ಪಟ್ಟಿದೆ. ಹೌದು, ಇದು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕು ಸಿದ್ದಾಪುರ ಹೋಬಳಿಯ ಕಕ್ಕರಗೋಳ ಮತ್ತು ನಂದಿಹಳ್ಳಿ ಗ್ರಾಮಗಳ ಬಳಿ ಹರಿಯುವ ಜೀವನದಿ ತುಂಗಭದ್ರೆಯ ಒಡಲು ಸಂಪೂರ್ಣ ಬರಿದಾಗಿದ್ದು, ಹನಿ ನೀರಿಲ್ಲದೆ, ಸೂಕ್ತ ಪ್ರಮಾಣದ ಆಮ್ಲಜನಕ ಸಿಗದೇ ಸಾವಿರಾರು ಮೀನುಗಳು ನದಿಯ ದಂಡೆಯಲ್ಲೇ ತರಗೆಲೆಗಳಂತೆ ಉಸಿರು ಚೆಲ್ಲುತ್ತಿವೆ. ನದೀತೀರದುದ್ದಕ್ಕೂ ಸಾಲು ಸಾಲು ಮೀನುಗಳು ಸತ್ತು ಬಿದ್ದಿರುವ ಈ ದೃಶ್ಯ ಯಾವುದೇ ಕಠೋರ ಹೃದಯವನ್ನೂ ಕರಗಿಸುವಂತಿದೆ.
ಕೆಸರು ಗುಂಡಿಯಾದ ನದಿ, ಉಸಿರುಗಟ್ಟಿ ತೀರಕ್ಕೆ ಬಿದ್ದ ಜೀವರಾಶಿ: ಮಳೆಗಾಲದಲ್ಲಿಯೇ ನದಿಯಲ್ಲಿ ನೀರಿನ ಮಟ್ಟ ಸಂಪೂರ್ಣವಾಗಿ ಕುಸಿದಿದ್ದು, ಕಲ್ಲು-ಬಂಡೆಗಳು ಹಾಗೂ ಒಣಗಿದ ಹಸಿರು ಪಾಚಿ ಮಾತ್ರ ಕಣ್ಣಿಗೆ ಕಾಣಿಸುತ್ತಿದೆ. ಅಲ್ಲಲ್ಲಿ ನಿಂತಿರುವ ಅಲ್ಪಸ್ವಲ್ಪ ಕೆಸರು ಮಿಶ್ರಿತ ಕಲುಷಿತ ನೀರಿನಲ್ಲೇ ಮೀನುಗಳು ಬದುಕಲು ಹೋರಾಡುತ್ತಿವೆ. ಆದರೆ, ತಾಪಮಾನದ ತೀವ್ರ ಹೆಚ್ಚಳ ಹಾಗೂ ನೀರಿನಲ್ಲಿ ಆಮ್ಲಜನಕದ (ಆಕ್ಸಿಜೆನ್) ಕೊರತೆಯಿಂದಾಗಿ ಉಸಿರುಗಟ್ಟಿ ತೀರಕ್ಕೆ ಬಂದು ಪ್ರಾಣ ಬಿಡುತ್ತಿವೆ. ಭೀಕರ ದೃಶ್ಯ: ಪ್ರಸ್ತುತ ನದಿಯ ದಂಡೆಯುದ್ದಕ್ಕೂ ಸಾವಿರಾರು ಸತ್ತು ಬಿದ್ದಿರುವ ಮೀನುಗಳು ಕೊಳೆಯುತ್ತಿದ್ದು, ಇಡೀ ಪ್ರದೇಶದಲ್ಲಿ ತೀವ್ರ ದುರ್ವಾಸನೆ ಹರಡಿದೆ. ಇದರಿಂದಾಗಿ ಸುತ್ತಮುತ್ತಲಿನ ಹಳ್ಳಿಗಳ ಜನರಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಇನ್ನು ಸತ್ತು ಬಿದ್ದಿರುವ ಮೂಕ ಜೀವಿಗಳನ್ನು ತಿನ್ನಲು ನೂರಾರು ಕಾಗೆಗಳು ಹಾಗೂ ಪಕ್ಷಿಗಳು ನದಿಯತ್ತ ಲಗ್ಗೆ ಇಡುತ್ತಿದ್ದು, ಇಡೀ ಪರಿಸರ ವ್ಯವಸ್ಥೆಯೇ ತಲ್ಲಣಗೊಂಡಿದೆ.
ರೋಗಭೀತಿ: ಕೊಳೆಯುತ್ತಿರುವ ಮೀನುಗಳಿಂದಾಗಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತೀವ್ರ ಆತಂಕ ಮೂಡಿದೆ. ನಮ್ಮ ಕಣ್ಣೆದುರೇ ನದಿಯ ಜೀವರಾಶಿಗಳು ಹೀಗೆ ಸಾಯುತ್ತಿರುವುದು ತೀವ್ರ ಆತಂಕ ಹಾಗೂ ಬೇಸರ ಮೂಡಿಸಿದೆ. ಜಲಾಶಯದಿಂದ ನದಿ ಪಾತ್ರದಲ್ಲಿ ಕನಿಷ್ಠ ಪ್ರಮಾಣದ ನೀರನ್ನಾದರೂ ಕಾಯ್ದುಕೊಳ್ಳಲು ಸರ್ಕಾರ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು. ತಕ್ಷಣವೇ ನದಿಗೆ ನೀರು ಹರಿಸದಿದ್ದರೆ ಮುಂದಿನ ದಿನಗಳಲ್ಲಿ ನಮಗೆ ಕುಡಿಯುವ ನೀರಿಗೂ ತತ್ವಾರ ಎದುರಾಗಲಿದೆ, ಎಂದು ಸ್ಥಳೀಯ ಗ್ರಾಮಸ್ಥರು ಹಾಗೂ ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಇನ್ನಾದರೂ ಎಚ್ಚೆತ್ತುಕೊಳ್ಳುವುದೇ ಇಲಾಖೆ: ಈ ಪರಿಸರ ದುರಂತ ಹೀಗೆಯೇ ಮುಂದುವರಿದರೆ ನದಿಯ ಪರಿಸರ ವ್ಯವಸ್ಥೆ ಸಂಪೂರ್ಣವಾಗಿ ನಾಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸಂಬಂಧಪಟ್ಟ ಮೀನುಗಾರಿಕಾ ಇಲಾಖೆ ಹಾಗೂ ಜಲಸಂಪನ್ಮೂಲ (ನೀರಾವರಿ) ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿದೆ. ಜಲಚರಗಳ ರಕ್ಷಣೆಗೆ ಕನಿಷ್ಠ ಪ್ರಮಾಣದ ನೀರನ್ನು ಜಲಾಶಯದಿಂದ ಬಿಡಲು ಅಥವಾ ಪರ್ಯಾಯ ತುರ್ತು ವ್ಯವಸ್ಥೆ ಮಾಡಲು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.
