ಸುದ್ದಿ ಕನ್ನಡ ವಾರ್ತೆ
ಕುಮಟಾ: ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಸಿ.ವಿ.ಎಸ್.ಕೆ. ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಕೆ.ಬಿ. ಅನೀಶ್ ರಾಷ್ಟ್ರಮಟ್ಟದ ಯೋಗ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.
ಹೊನ್ನಾವರ ತಾಲೂಕಿನ ಕೊಂಡದಕುಳಿ ಬೇರಂಕಿಯ ಕಲಾಧರ ಹಾಗೂ ಮುಕ್ತಾ ದಂಪತಿ ಪುತ್ರ ಅನೀಶ್, ಜು. 11ರಂದು ಬೆಂಗಳೂರಿನ ಮಲ್ಲೇಶ್ವರದಲ್ಲಿ ವರ್ಲ್ಡ್ ಯೋಗಾ ಅಂಡ್ ಸ್ಪೋರ್ಟ್ಸ್ ಎಜುಕೇಶನ್ ಕೌನ್ಸಿಲ್ ಆಯೋಜಿಸಿದ್ದ 11ರಿಂದ 15 ವರ್ಷ ವಯೋಮಿತಿಯ ರಾಷ್ಟ್ರಮಟ್ಟದ ಯೋಗ ಚಾಂಪಿಯನ್‌ಶಿಪ್‌ನ ಆರ್ಟಿಸ್ಟಿಕ್ ಯೋಗ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾನೆ.
ಈ ಗಮನಾರ್ಹ ಸಾಧನೆಯೊಂದಿಗೆ ಅನೀಶ್ ಮುಂಬರುವ ಅಕ್ಟೋಬರ್‌ನಲ್ಲಿ ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದು, ದೇಶವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾನೆ. ಈ ಮೂಲಕ ಶಾಲೆ, ಜಿಲ್ಲೆ ಹಾಗೂ ರಾಜ್ಯದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೇರಿಸಿ, ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸಾಧನೆ ಮಾಡುವ ಭರವಸೆ ಮೂಡಿಸಿದ್ದಾನೆ.
