ಸುದ್ದಿ ಕನ್ನಡ ವಾರ್ತೆ
ಶಿರಸಿ: “ಈ ಹಿಂದೆ ಯಡಿಯೂರಪ್ಪನವರ ಸರ್ಕಾರವಿದ್ದಾಗ ಪ್ರಕೃತಿ ವಿಕೋಪದಿಂದ ಎಲ್ಲಿಯೇ ಮನೆಗೆ ಹಾನಿಯಾದರೂ ತಕ್ಷಣ 24 ರಿಂದ 48 ಗಂಟೆಗಳ ಒಳಗಾಗಿ ಪರಿಹಾರ ನೀಡುವ ಕೆಲಸವಾಗುತ್ತಿತ್ತು. ಆದರೆ ಈಗಿನ ಸರ್ಕಾರದ ವ್ಯವಸ್ಥೆಯಲ್ಲಿ ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ,” ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಟೀಕಿಸಿದ್ದಾರೆ.ತಾಲೂಕಿನ ಹು ತ್ತಗಾರು ಗ್ರಾ.ಪಂ. ವ್ಯಾಪ್ತಿಯ ಪುಟ್ಟನಮನೆಯ ಶಿವಾನಂದ ಎಸ್. ಗೊಂಡೇನಹಳ್ಳಿ ಅವರ ಮನೆಯ ಪಕ್ಕದಲ್ಲಿನ ಧರೆ ಕುಸಿದು, ಕೋಣೆ ಹಾಗೂ ನೀರಿನ ಟ್ಯಾಂಕ್ ಸಂಪೂರ್ಣ ಹಾನಿಗೊಳಗಾದ ಸ್ಥಳಕ್ಕೆ ಬಿಜೆಪಿ ಪ್ರಮುಖರೊಂದಿಗೆ ಭೇಟಿ ನೀಡಿ, ವೈಯಕ್ತಿಕವಾಗಿ ಆರ್ಥಿಕ ನೆರವು ವಿತರಿಸಿ ಅವರು ಮಾತನಾಡಿದರು.
“ಈ ಘಟನೆ ನಡೆದು 4 ದಿನಗಳು ಕಳೆದರು, ಅಧಿಕಾರಿಗಳನ್ನು ವಿಚಾರಿಸಿದರೆ ಇನ್ನು ಹಾನಿಯ ಅಂದಾಜು ವರದಿ ಸಲ್ಲಿಕೆಯಾಗಿಲ್ಲ ಎಂದು ಬೇಜವಾಬ್ದಾರಿಯ ಉತ್ತರ ನೀಡುತ್ತಿದ್ದಾರೆ. ಮತ್ತೆ ಮಳೆ ಬಂದರೆ ಪಕ್ಕದಲ್ಲಿರುವ ಧರೆ ಮತ್ತೆ ಕುಸಿಯುವ ಭೀತಿ ಸಂತ್ರಸ್ತರನ್ನು ಕಾಡುತ್ತಿದೆ. ಇಲ್ಲಿ ಧರೆ ಕುಸಿಯದಂತೆ ಅವೈಜ್ಞಾನಿಕವಾಗಿ ತಡೆಗೋಡೆ ನಿರ್ಮಿಸಿರುವುದೇ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಸಂತ್ರಸ್ತರಾದ ಶಿವಾನಂದ ಅವರು ಔಷಧದ ಅಂಗಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ. ಇಂತಹ ಬಡ ಕುಟುಂಬಕ್ಕೆ ಹಾನಿ ಸಂಭವಿಸಿ 4 ದಿನ ಕಳೆದರೂ ಯಾವುದೇ ಪರಿಹಾರ ಸಿಗದಿರುವುದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಈಗಾಗಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಆದಷ್ಟು ಬೇಗ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು,” ಎಂದರು.
ಬಳಿಕ ಹುತ್ತಗಾರು ಗ್ರಾ.ಪಂ. ಪಿಡಿಒ ಹಾಗೂ ಗ್ರಾಮ ಆಡಳಿತಾಧಿಕಾರಿ (VA) ಅವರಿಗೆ ದೂರವಾಣಿ ಕರೆ ಮಾಡಿದ ಅನಂತಮೂರ್ತಿ ಹೆಗಡೆಯವರು , ಹಾನಿಯ ವರದಿಯನ್ನು ಶೀಘ್ರವಾಗಿ ಸಲ್ಲಿಸಿ ಪರಿಹಾರ ಒದಗಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಆನಂದ್ ಸಾಲೇರ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ನಾಗರಾಜ್ ನಾಯ್ಕ್, ಹುತ್ತಗಾರು ಗ್ರಾ.ಪಂ. ಮಾಜಿ ಸದಸ್ಯ ಫಕೀರಪ್ಪ ಹಾಗೂ ಇತರರು ಉಪಸ್ಥಿತರಿದ್ದರು.
