ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನಾದ್ಯಂತ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಹಲವು ಗ್ರಾಮಗಳಲ್ಲಿ ಬಲವಾದ ಗಾಳಿಯಿಂದ ಮರಗಳು ಉರುಳಿ ಬಿದ್ದಿದ್ದು ರಸ್ತೆಯ ಸಂಚಾರದಲ್ಲಿ ಅಡಚಣೆ, ತಾಲೂಕಿನಾದ್ಯಂತ ವಿದ್ಯುತ್ ವ್ಯತ್ಯಯ ಹಾಗೂ ಮನೆ,ಕೊಟ್ಟಿಗೆಗಳ ಮೇಲೆ ಮರ ಬಿದ್ದು ಜಾನುವಾರಗಳ ಜೀವ ಹಾನಿ ಸಂಭವಿಸಿರುವ ವರದಿಯಾಗಿದೆ.
ನಿನ್ನೆಯಿಂದ ಮಳೆಯ ಪ್ರಮಾಣ ಮತ್ತು ಗಾಳಿಯ ತೀವ್ರತೆ ಗಮನಾರ್ಹವಾಗಿ ಕಡಿಮೆಯಾಗಿದ್ದು, ಜನರು ಕೊಂಚ ನಿರಾಳರಾಗಿದ್ದಾರೆ. ಆದಾಗ್ಯೂ, ಕೆಲ ಪ್ರದೇಶಗಳಲ್ಲಿ ಇನ್ನೂ ಮರದ ಕೊಂಬೆಗಳು ರಸ್ತೆಗಳಿಗೆ ಅಡ್ಡಿಯಾಗಿರುವುದು ಹಾಗೂ ಮಳೆ ನೀರು ನಿಂತಿರುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ.
ಸ್ಥಳೀಯ ಆಡಳಿತ ಮತ್ತು ಸಂಬಂಧಿತ ಇಲಾಖೆಗಳು ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ನಡೆಸುತ್ತಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ಹವಾಮಾನದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹವಾಮಾನ ಇಲಾಖೆಯ ಸೂಚನೆಗಳನ್ನು ಪಾಲಿಸಬೇಕಾಗಿದೆ.
