ಸುದ್ದಿ ಕನ್ನಡ ವಾರ್ತೆ
ಕಾರವಾರ: ತಾಲೂಕಿನ ಶಿರವಾಡ ಗ್ರಾಮದ ಬಂಗಾರಪ್ಪ ನಗರದಲ್ಲಿ ಸಂಭವಿಸಿದ ದಿಢೀರ್ ವಿದ್ಯುತ್ ವೋಲ್ಟೇಜ್ ಏರುಪೇರಿನಿಂದಾಗಿ ಹಲವು ಮನೆಗಳಲ್ಲಿದ್ದ ಗೃಹೋಪಯೋಗಿ ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟು ಕರಕಲಾಗಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಸ್ಥಳೀಯ ನಿವಾಸಿಗಳು ನೀಡಿರುವ ಮಾಹಿತಿಯ ಪ್ರಕಾರ ಮಂಗಳವಾರ ರಾತ್ರಿ ಅನಿರೀಕ್ಷಿತವಾಗಿ ವಿದ್ಯುತ್ ಸರಬರಾಜಿನಲ್ಲಿ ಭಾರೀ ಪ್ರಮಾಣದ ವೋಲ್ವೇಜ್ ಹೆಚ್ಚಳವಾಗಿದೆ. ಇದರ ಪರಿಣಾಮವಾಗಿ ಮನೆಗಳಲ್ಲಿದ್ದ ಟಿವಿ, ಫ್ಯಾನ್, ರೆಫ್ರಿಜರೇಟರ್, ಮೊಬೈಲ್ ಚಾರ್ಜರ್ಗಳು, ಮಿಕ್ಸಿ ಹಾಗೂ ಇನ್ನಿತರ ಬೆಲೆಬಾಳುವ ಎಲೆಕ್ಟ್ರಿಕಲ್ ಉಪಕರಣಗಳು ಕ್ಷಣಾರ್ಧದಲ್ಲಿ ಸುಟ್ಟು ಹೋಗಿವೆ. ಒಂದೇ ಬಾರಿಗೆ ಸಾಲು ಸಾಲು ಮನೆಗಳಲ್ಲಿ ಶಾರ್ಟ್ ಸರ್ಕ್ಯೂಟ್ ಮಾದರಿಯ ಅವಘಡ ಸಂಭವಿಸಿದ್ದರಿಂದ ಇಡೀ ಬಡಾವಣೆಯ ಜನರಲ್ಲಿ ತೀವ್ರ ಆತಂಕ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ವೋಲ್ವೇಜ್ ವೈಪರೀತ್ಯದಿಂದಾಗಿ ಬಂಗಾರಪ್ಪ ನಗರದ ನಿವಾಸಿಗಳಿಗೆ ಒಟ್ಟಾರೆಯಾಗಿ ಲಕ್ಷಾಂತರ ರೂಪಾಯಿಗಳ ಆಸ್ತಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ದೈಹಿಕ ಗಾಯಗಳಾಗಿಲ್ಲ ಹಾಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಹೆಸ್ಕಾಂ ವಿರುದ್ಧ ಆಕ್ರೋಶ: ಪರಿಹಾರಕ್ಕೆ ಆಗ್ರಹ.
ಘಟನೆ ನಡೆದ ತಕ್ಷಣವೇ ಜಾಗೃತರಾದ ಸಾರ್ವಜನಿಕರು ಹೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಮತ್ತು ಈ ವೋಲ್ವೇಜ್ ಏರುಪೇರಿಗೆ ನಿಖರವಾದ ಕಾರಣವೇನು ಎಂಬುದನ್ನು ಪತ್ತೆ ಹಚ್ಚಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ. ನಮ್ಮ ತಪ್ಪಿಲ್ಲದಿದ್ದರೂ ಹೆಸ್ಕಾಂ ಬೇಜವಾಬ್ದಾರಿಯಿಂದಾಗಿ ನಮ್ಮ ಮನೆಗಳ ಉಪಕರಣಗಳು ಹಾಲಾಗಿವೆ. ನಮಗೆ ಸೂಕ್ತ ನಷ್ಟ ಪರಿಹಾರ ನೀಡಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಹೆಸ್ಕಾಂ ಇಲಾಖೆ ಶಾಶ್ವತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂತ್ರಸ್ತ ನಿವಾಸಿಗಳು ಆಗ್ರಹಿಸಿದ್ದಾರೆ.
