ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಕುಂಬಾರವಾಡಾದ ಉಳವಿ ಕ್ರಾಸ್ ನ ನರ್ಸರಿ ಬಳಿಯ ಕುಂಬಾರವಾಡಾ-ಕಾರವಾರ ರಾಜ್ಯ ಹೆದ್ದಾರಿಯ ಬಹಳ ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಭಾರೀ ಅನಾಹುತ ಸಂಭವಿಸುವ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಲ್ಲಿ ಹಳೆಯ ಹಲವು ಸಣ್ಣ ಪುಟ್ಟ ಸೇತುವೆಗಳು ಶಿಥಿಲಗೊಂಡಿದ್ದು, ಅವುಗಳಲ್ಲಿ ಭಾರಿ ವಾಹನಗಳು ಓಡಾಡದೇ ಇರುವುದರಿಂದ ಇನ್ನೂ ವರೆಗೆ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ ಕುಂಬಾರವಾಡಾ- ಕಾರವಾರ ರಾಜ್ಯ ಹೆದ್ದಾರಿಯಲ್ಲಿ ಪ್ರತಿ ದಿನ ನೂರಾರು ವಾಹನಗಳು ಸಂಚರಿಸುತ್ತಿವೆ. ಅದರಲ್ಲಿ 10 ಟನ್ ಗಿಂತ ಅಧಿಕ ತೂಕದ ಲಾರಿಗಳು ಸೇರಿವೆ.ಬೃಹತ್ ವಾಹನಗಳ ಓಡಾಟವನ್ನು ಕೂಡಲೇ ನಿಲ್ಲಿಸಬೇಕು, ವಿಪರೀತ ಮಳೆಯಿಂದಾಗಿ ಸೇತುವೆ ಬಹುಬೇಗ ಅನಾಹುತಕ್ಕೆ ಒಳಗಾಗುವ ಸಾಧ್ಯತೆಯಿದೆ. ಸೇತುವೆಗೆ ಹಾನಿಯಾದರೆ, ಈ ಭಾಗದ ಸಾವಿರಾರು ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಆಗಲಿದೆ.
ಈ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದರೂ, ಇನ್ನೂವರೆಗೆ ಈ ಬಗ್ಗೆ ಯಾವುದೇ ತುರ್ತು ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಸೇತುವೆಯನ್ನು ಶೀಘ್ರ ಸರಿಪಡಿಸುವ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಈ ಬಗ್ಗೆ ಉಗ್ರ ಹೋರಾಟ ಮಾಡುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
