ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ ವ್ಯಾಪ್ತಿಯ ಪಣಸೋಲಿಯ ಗೌಳಿವಾಡದಲ್ಲಿ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದು ವಾಸದ ಮನೆ ಮತ್ತು ದನದ ಕೊಟ್ಟಿಗೆ ಜಖಂಗೊಂಡು, ಕೊಟ್ಟಿಗೆಯಲ್ಲಿದ್ದ ಆಕಳೊಂದು ಸಾವನ್ನಪ್ಪಿ, ಮನೆಯಲ್ಲಿದ್ದ ದಂಪತಿಗಳಿಗೆ ಗಾಯವಾದ ಘಟನೆ ಸೋಮವಾರ ನಡೆದಿದೆ.
ಪಣಸೋಲಿಯ ಗೌಳಿವಾಡದ ನಿವಾಸಿಯಾದ ಬಡ ಕುಟುಂಬದ ರಮೇಶ ಬಾಬು ಸಿಂಗಾಡೆ ಎಂಬುವರ ಮನೆ ಹಾಗೂ ಕೊಟ್ಟಿಗೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಮನೆ ಮತ್ತು ಈ ಸಂದರ್ಭದಲ್ಲಿ ಕೊಟ್ಟಿಗೆಯಲ್ಲಿದ್ದ ಆಕಳು
ಕೂಡ ಸ್ಥಳದಲ್ಲಿ ಸಾವನ್ನಪ್ಪಿದೆ. ಮನೆಯಲ್ಲಿದ್ದ ರಮೇಶ ಬಾಬು ಸಿಂಗಾಡೆ ಹಾಗೂ ಅವರ ಪತ್ನಿ ಜನ್ನಿ ರಮೇಶ ಸಿಂಗಾಡೆ ಅವರಿಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದೆ.
ಈ ಘಟನೆಯಿಂದ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ತುಂಬಲಾರದ ಹಾನಿಯಾಗಿದ್ದು, ತಾಲೂಕಾಡಳಿತ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ತುರ್ತಾಗಿ ಕೈಗೊಳ್ಳಬೇಕಾಗಿದೆ. ಮನೆ ಹಾಗೂ ಜೀವನಾಧಾರವಾಗಿದ್ದ ಕೊಟ್ಟಿಗೆ ಎರಡು ಜಖಂಗೊಂಡಿರುವುದರಿಂದ ಬಡ ಕುಟುಂಬವು ಮುಂದೆ ಏನು ಎತ್ತ ಎಂಬ ಕೊರಗಿನಲ್ಲಿ ದಿನ ಕಳೆಯಬೇಕಾದ ಸ್ಥಿತಿ ಇನ್ನೂ ನಿರ್ಮಾಣವಾಗಿದೆ. ಗೌಳಿವಾಡದಲ್ಲಿ ವಾಸವಿರುವ ಸಮುದಾಯದವರ ಇನ್ನೂ ಅನೇಕ ಮನೆಗಳಿದ್ದು, ಇಲ್ಲಿ ಬಹಳಷ್ಟು ಆತಂಕಕಾರಿ ಮರಗಳಿರುವುದರಿಂದ ಅವುಗಳ ತೆರವಿಗೂ ಅರಣ್ಯ ಇಲಾಖೆ ಉಪಯುಕ್ತ ಕ್ರಮವನ್ನು ಕೈಗೊಳ್ಳ ಬೇಕಾಗಿದೆ. ಇಲ್ಲವಾದಲ್ಲಿ ಮತ್ತಷ್ಟು ಇಂತಹ ಘಟನೆಗಳು ನಡೆದರು ಅಚ್ಚರಿಪಡಬೇಕಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
