ಸುದ್ದಿ ಕನ್ನಡ ವಾರ್ತೆ
ಕುಮಟಾ :ಮಕ್ಕಳಿಗೆ ಕಲಿಕೆ ಎಂದರೆ ಕೇವಲ ತರಗತಿ ಕೊಠಡಿಯ ಪಾಠಗಳಿಗೆ ಮಾತ್ರ ಸೀಮಿತವಾಗಿರದೆ, ಅನುಭವದ ಮೂಲಕವೂ ಜ್ಞಾನವನ್ನು ನೀಡಬೇಕು ಎಂಬ ಉದ್ದೇಶದಿಂದ ಕುಮಟಾ ತಾಲೂಕಿನ ಕೊಂಕಣ ಎಜುಕೇಶನ್ ಟ್ರಸ್ಟ್ನ ಸರಸ್ವತಿ ವಿದ್ಯಾ ಕೇಂದ್ರ ಕುಮಟಾ ದ ಶಾಲೆಯಲ್ಲಿ ಆಯೋಜಿಸಲಾದ ‘ರೇನಿ ಡೇ’ ಕಾರ್ಯಕ್ರಮ ಸಂಭ್ರಮ, ಸಡಗರ ಮತ್ತು ಪರಿಸರ ಜಾಗೃತಿಯ ಸಂಗಮವಾಗಿ ಗಮನ ಸೆಳೆಯಿತು.
ಬಣ್ಣಬಣ್ಣದ ಉಡುಪುಗಳನ್ನು ಧರಿಸಿ, ಕೈಯಲ್ಲಿ ಬಣ್ಣದ ಛತ್ರಿಗಳನ್ನು ಹಿಡಿದು ಮಳೆಯ ಹಾಡುಗಳಿಗೆ ತಕ್ಕಂತೆ ಹೆಜ್ಜೆ ಹಾಕಿದ ಪುಟಾಣಿ ವಿದ್ಯಾರ್ಥಿಗಳು ಇಡೀ ಶಾಲಾ ಆವರಣವನ್ನು ಸಂಭ್ರಮದ ವಾತಾವರಣವನ್ನಾಗಿ ಪರಿವರ್ತಿಸಿದರು. ಮಳೆಯ ಹನಿಗಳೊಂದಿಗೆ ಮಕ್ಕಳ ಮುಗ್ಧ ನಗು, ಕೇಕೆ ಮತ್ತು ಕುಣಿತ ನೋಡುಗರ ಮನಸ್ಸಿಗೆ ಮುದ ನೀಡಿತು.
ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಮಕ್ಕಳಿಗೆ ಜಲಚಕ್ರ, ಮಳೆಯ ರಚನೆ, ನೀರಿನ ಮೂಲಗಳು ಹಾಗೂ ನೀರಿನ ಸಂರಕ್ಷಣೆಯ ಮಹತ್ವವನ್ನು ಪ್ರಾಯೋಗಿಕವಾಗಿ ಪರಿಚಯಿಸುವುದಾಗಿತ್ತು. ಶಿಕ್ಷಕರು ಚಿತ್ರಗಳು, ಸಂವಾದ ಹಾಗೂ ಚಟುವಟಿಕೆಗಳ ಮೂಲಕ ಮೋಡಗಳ ರಚನೆ, ಆವಿಯಾಗುವಿಕೆ, ಘನೀಕರಣ ಮತ್ತು ಮಳೆಯ ಪ್ರಕ್ರಿಯೆಯನ್ನು ಸರಳವಾಗಿ ವಿವರಿಸಿದರು. ಇದರ ಜೊತೆಗೆ “ನೀರೇ ಜೀವ”, “ಪ್ರತಿಯೊಂದು ಹನಿ ಅಮೂಲ್ಯ” ಎಂಬ ಸಂದೇಶಗಳನ್ನು ಮಕ್ಕಳ ಮನಸ್ಸಿನಲ್ಲಿ ಬೇರೂರಿಸುವ ಪ್ರಯತ್ನ ನಡೆಸಲಾಯಿತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ವಿದ್ಯಾರ್ಥಿಗಳಿಗಾಗಿ ರೈನ್ ಡ್ಯಾನ್ಸ್ ಆಯೋಜಿಸಲಾಗಿತ್ತು. ಸಹಜವಾಗಿ ಮಳೆ ಸುರಿಯದ ಕಾರಣ ಮಕ್ಕಳ ಉತ್ಸಾಹಕ್ಕೆ ಯಾವುದೇ ಕೊರತೆಯಾಗದಂತೆ ಶಾಲೆಯ ವತಿಯಿಂದ ಕೃತಕ ಮಳೆಯ ವ್ಯವಸ್ಥೆ ಮಾಡಲಾಯಿತು. ನೀರಿನ ಹನಿಗಳು ಸುರಿಯುತ್ತಿದ್ದಂತೆ ಮಕ್ಕಳು ಸಂಭ್ರಮದಿಂದ ಕೇಕೆ ಹಾಕುತ್ತಾ ಹಾಡಿನ ಲಯಕ್ಕೆ ಅನುಗುಣವಾಗಿ ಛತ್ರಿಗಳನ್ನು ಹಿಡಿದು ನರ್ತಿಸಿದರು. ಪುಟಾಣಿ ಮಕ್ಕಳ ಮುಗ್ಧ ನಗು, ಉಲ್ಲಾಸ ಮತ್ತು ಕುಣಿತ ಎಲ್ಲರ ಗಮನ ಸೆಳೆಯಿತು.
ಒಂದನೇ ತರಗತಿಯ ವಿದ್ಯಾರ್ಥಿಗಳು ವಿಶೇಷ ನೃತ್ಯ ಪ್ರದರ್ಶಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಉಳಿದ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಸ್ನೇಹಿತರನ್ನು ಹುರಿದುಂಬಿಸಿ ಸಂಭ್ರಮದಲ್ಲಿ ಭಾಗಿಯಾದರು. ಮಳೆಯ ಆಟಗಳ ಜೊತೆಗೆ ಮಕ್ಕಳಿಗೆ ಸುರಕ್ಷಿತವಾಗಿ ಮಳೆಯಲ್ಲಿ ಆನಂದಿಸುವ ವಿಧಾನಗಳನ್ನೂ ಶಿಕ್ಷಕರು ತಿಳಿಸಿಕೊಟ್ಟರು.
‘ಆಟದ ಮೂಲಕ ಕಲಿಕೆ’ ಎಂಬ ಪರಿಕಲ್ಪನೆಯನ್ನು ಯಶಸ್ವಿಯಾಗಿ ಸಾಕಾರಗೊಳಿಸಿದ ಈ ಕಾರ್ಯಕ್ರಮದಲ್ಲಿ ಮಕ್ಕಳು ಪ್ರಕೃತಿಯೊಂದಿಗೆ ಬೆರೆತು ಮಳೆಯ ಸೊಬಗನ್ನು ಆಸ್ವಾದಿಸುವುದರ ಜೊತೆಗೆ ಪರಿಸರ ಸಂರಕ್ಷಣೆ, ನೀರಿನ ಮೌಲ್ಯ ಮತ್ತು ಪ್ರಕೃತಿಯ ಬಗ್ಗೆ ಕಾಳಜಿ ವಹಿಸುವ ಸಂದೇಶವನ್ನು ಸಹ ಅರಿತುಕೊಂಡರು.
ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿಯವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ವಿದ್ಯಾರ್ಥಿಗಳ ಸಂತಸ, ಪಾಲಕರ ಮೆಚ್ಚುಗೆ ಹಾಗೂ ಶಿಕ್ಷಕರ ಸೃಜನಾತ್ಮಕ ಯೋಜನೆಯಿಂದ ಪ್ರತಿ ವರ್ಷ ದಂತೆ ‘ರೇನಿ ಡೇ’ ಈ ಶೈಕ್ಷಣಿಕ ವರ್ಷದ ಅತ್ಯಂತ ವಿಶಿಷ್ಟ ಮತ್ತು ಸ್ಮರಣೀಯ ಕಾರ್ಯಕ್ರಮವಾಗಿ ಮೂಡಿಬಂದಿತು.
