ಸುದ್ದಿ ಕನ್ನಡ ವಾರ್ತೆ
ಹಳಿಯಾಳ:ತಾಲೂಕಿನ ಹಳಿಯಾಳ- ದಾಂಡೇಲಿ ರಸ್ತೆಯ ಅಜಗಾಂವ್ ಬಳಿ ಡ್ರೈವಿಂಗ್ ಲೈಸನ್ಸ್ ಹಾಗೂ ತಲೆಗಿರಬೇಕಾದ ಹೆಲೈಟ್ ಇಲ್ಲದೆ ಅತಿವೇಗದಿಂದ ಬೈಕ್ ಚಲಾಯಿಸಿದ 17 ವರ್ಷದ ಪಿಯುಸಿ ವಿದ್ಯಾರ್ಥಿಯೊಬ್ಬ ಭೀಕರ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

ಮೃತನನ್ನು ಹಳಿಯಾಳದ ಕಾನ್ವೆಂಟ್ ರಸ್ತೆಯ ನಿವಾಸಿ ಜಾನ್‌ವಿಯಾನ್ನಿ ಜೇಮ್ಸ್ ಡಿಸೋಜಾ (17) ಎಂದು ಗುರುತಿಸಲಾಗಿದೆ. ಸಂಚಾರಿ ನಿಯಮ ಉಲ್ಲಂಘನೆ ಹಾಗೂ ಅಪ್ರಾಪ್ತರ ಅತಿವೇಗದ ಚಾಲನೆಗೆ ಮತ್ತೊಂದು ಅಮಾಯಕ ಜೀವ ಬಲಿಯಾದಂತಾಗಿದೆ.
ಶನಿವಾರ(ಏ.4) ರಾತ್ರಿ ಡಿಸೋಜಾ ಕುಟುಂಬವು ಹಳಿಯಾಳದ ಸೇಂಟ್ ಮಿಲಾಗ್ರೀಸ್ ಚರ್ಚ್‌ನಲ್ಲಿ ಈಸ್ಟರ್ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿತ್ತು. ಹಬ್ಬದ ಸಂಭ್ರಮದ ನಡುವೆಯೇ, ಭಾನುವಾರ(ಏ.5) ಬೆಳಗಿನ ಜಾವ ಸುಮಾರು 2 ಗಂಟೆಯ ಸುಮಾರಿಗೆಜಾನ್‌ವಿಯಾನ್ನಿ ಯಾರಿಗೂ ಹೇಳದೆ ಮನೆಯಲ್ಲಿದ್ದ ಮೋಟಾರ್ ಸೈಕಲ್ (KA-27/EA-8751) ತೆಗೆದುಕೊಂಡು ಹೊರಟಿದ್ದನು.

ಹಳಿಯಾಳದಿಂದ ದಾಂಡೇಲಿ ಕಡೆಗೆ ತೆರಳುತ್ತಿದ್ದ ಜಾನ್‌ವಿಯಾನ್ನಿ, ಬೈಕನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ್ದಾನೆ. ಅಜಗಾಂವ್‌ ಬಳಿ ಬರುತ್ತಿದ್ದಂತೆ ನಿಯಂತ್ರಣ ತಪ್ಪಿದ ಬೈಕ್, ನೇರವಾಗಿ ರಸ್ತೆ ಬದಿಯಿದ್ದ ಹರಿದಾಸ ಶಿಂಧೆ ಎಂಬುವವರ ಕಬ್ಬಿನ ಗದ್ದೆಗೆ ನುಗ್ಗಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಿಂದ ಹಾರಿಬಿದ್ದ ಯುವಕನ ತಲೆಗೆ ಗಂಭೀರ ಸ್ವರೂಪದ ಪೆಟ್ಟಾಗಿದೆ. ಹೆಲ್ಕೆಟ್ ಧರಿಸದ ಕಾರಣ ತಲೆಗೆ ತೀವ್ರ ಪೆಟ್ಟಾಗಿದ್ದು, ಮಧ್ಯರಾತ್ರಿ ರಸ್ತೆಯಲ್ಲಿ ಯಾರ ನೆರವೂ ಸಿಗದೆ, ತೀವ್ರ ರಕ್ತಸ್ರಾವವಾಗಿ ರಾತ್ರಿಯಿಡೀ ನರಳಿ ನರಳಿ ಆ ಯುವಕ ಒಂಟಿಯಾಗಿಯೇ ಪ್ರಾಣಬಿಟ್ಟಿದ್ದಾನೆ.
ಮಗ ರಾತ್ರಿ ಬೈಕ್ ತೆಗೆದುಕೊಂಡು ಹೋಗಿದ್ದರ ಬಗ್ಗೆ ಪೋಷಕರಿಗೆ ಅರಿವಿರಲಿಲ್ಲ. ಬೆಳಿಗ್ಗೆ 9:30ರ ಸುಮಾರಿಗೆ ಸಂಬಂಧಿಕರಿಂದ ಕರೆ ಬಂದಾಗಷ್ಟೇ ಅಪಘಾತದ ವಿಚಾರ ಪೋಷಕರಿಗೆ ತಿಳಿದಿದೆ. ತಕ್ಷಣವೇ ಅಜಗಾಂವ್ ಬಳಿಯ ಕಬ್ಬಿನ ಗದ್ದೆಗೆ ತೆರಳಿ ನೋಡಿದಾಗ, ಮಗ ಶವವಾಗಿ ಬಿದ್ದಿರುವುದನ್ನು ಕಂಡು ಪೋಷಕರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಹಬ್ಬದ ಸಂಭ್ರಮದಲ್ಲಿದ್ದ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿತ್ತು.
ಈ ಭೀಕರ ರಸ್ತೆ ಅಪಘಾತದ ಕುರಿತು ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಹೊಸ ಕ್ರಿಮಿನಲ್ ಕಾನೂನು ‘ಭಾರತೀಯ ನ್ಯಾಯ ಸಂಹಿತೆ-2023’ರ (BNS) ಕಲಂ 281 ಹಾಗೂ 106(1)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.