ಸುದ್ದಿಕನ್ನಡ
ಪಣಜಿ: ಗೋವಾ ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಜುಲೈ 15 ರಿಂದ ಎಐ (ಕೃತಕ ಬುದ್ಧಿಮತ್ತೆ) ಕ್ಯಾಮೆರಾಗಳ ಮೂಲಕ ಸಂಚಾರವನ್ನು ಮೇಲ್ವಿಚಾರಣೆ ಮಾಡುವ ಮೂಲಕ ದಂಡ ವಿಧಿಸುವ ಕ್ರಮ ಪ್ರಾರಂಭವಾಗಲಿದೆ. ಎಐ ಕ್ಯಾಮೆರಾಗಳ ಮೂಲಕ ಸಂಚಾರವನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಉಲ್ಲಂಘಿಸುವವರಿಗೆ ದಂಡ ವಿಧಿಸುವ ಮೊದಲು ಜಾಗೃತಿ ಮೂಡಿಸುವುದು ಅಗತ್ಯವಾಗಿರುವುದರಿಂದ ಈ ಕ್ರಮವನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಗೋವಾ ರಾಜ್ಯ ಸಾರಿಗೆ ಸಚಿವ ಮಾವಿನ್ ಗುದಿನ್ಹೊ ಮಾಹಿತಿ ನೀಡಿದ್ದಾರೆ.
ಪಣಜಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು- ಗೋವಾ ರಾಜ್ಯದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ನಿಯಂತ್ರಿಸಲು, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ರಾಜ್ಯದ ಒಟ್ಟೂ 26 ಸ್ಥಳಗಳಲ್ಲಿ ಎಐ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾಗಳ ಸಹಾಯದಿಂದ, ಆಯಾ ಸ್ಥಳಗಳಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ದಂಡದ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಮಾವಿನ್ ಗುದಿನ್ಹೊ ಮಾಹಿತಿ ನೀಡಿದರು.
ಜುಲೈ 6 ರಂದು ಸಾರಿಗೆ ಇಲಾಖೆ ಸಭೆ ಸೇರಲಿದೆ. ಈ ಸಭೆಯಲ್ಲಿ ಎಐ ಕ್ಯಾಮೆರಾಗಳು ಹಾಗೂ ‘ಕಾರು ಬಾಡಿಗೆ’ ವ್ಯವಹಾರದ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಕಳೆದ ಎರಡು ವರ್ಷಗಳಲ್ಲಿ ಯಾವುದೇ ಹೊಸ ಕಾರು ಬಾಡಿಗೆ ವಾಹನಗಳಿಗೆ ಪರವಾನಗಿ ನೀಡಲಾಗಿಲ್ಲ. ಜುಲೈ 6 ರಂದು ನಡೆಯುವ ಸಭೆಯಲ್ಲಿ ಬಾಡಿಗೆ ಕಾರು ವಾಹನಗಳಿಗೆ ಪರವಾನಗಿ ನೀಡಬೇಕೆ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವ ಗುದಿನ್ಹೊ ಹೇಳಿದರು. ಬಾಡಿಗೆ ಕಾರು ವಾಹನಗಳನ್ನು ಪ್ರವಾಸಿಗರು ವ್ಯಾಪಕವಾಗಿ ಬಳಸುತ್ತಾರೆ. ಈ ವಾಹನಗಳಿಂದಲೇ ಅನೇಕ ಅಪಘಾತಗಳು ಸಂಭವಿಸುತ್ತಿವೆ ಎಂಬ ದೂರುಗಳು ಬಂದ ನಂತರ, ಸರ್ಕಾರವು ಹೊಸ ಕಾರು ಬಾಡಿಗೆ ವಾಹನಗಳಿಗೆ ಪರವಾನಗಿ ನೀಡುವುದನ್ನು ನಿಲ್ಲಿಸಿತು. ಇದು ಅಕ್ರಮ ವ್ಯವಹಾರಗಳ ಹೆಚ್ಚಳಕ್ಕೆ ಕಾರಣವಾಗಿದೆ. ಈ ಸಮಸ್ಯೆಯನ್ನು ಪರಿಹರಿಸುವ ಅವಶ್ಯಕತೆಯಿದೆ ಎಂದು ಸಚಿವ ಗುದಿನ್ಹೊ ನುಡಿದರು.
ಪ್ರಸ್ತುತ, ಎಲ್ಲಾ ವ್ಯವಹಾರಗಳು ಡಿಜಿಟಲ್ ಪ್ಲಾಟ್‍ಫಾರ್ಮ್‍ಗೆ ಬಂದಿವೆ. ಆದ್ದರಿಂದ, ಟ್ಯಾಕ್ಸಿ ಚಾಲಕರು ಸಹ ಡಿಜಿಟಲ್ ಪ್ಲಾಟ್‍ಫಾರ್ಮ್ ಅನ್ನು ಸ್ವೀಕರಿಸಬೇಕಾಗುತ್ತದೆ ಎಂದು ಸಚಿವ ಮಾವಿನ್ ಗುದಿನ್ಹೊ ಅಭಿಪ್ರಾಯಪಟ್ಟರು.
