ಸುದ್ದಿ ಕನ್ನಡ ವಾರ್ತೆ

ಇಂದಿನಿಂದ ಪ್ರಾರಂಭವಾಗಿರುವ ಮನೆಮನೆಗೂ ಬಂದು ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುವ “ವಿಶೇಷ ತೀವ್ರ ಪರಿಷ್ಕರಣೆ” (SIR) ಪ್ರಕ್ರಿಯೆಯಲ್ಲಿ ಶಿರಸಿ-ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಕ್ರಿಯವಾಗಿ ಭಾಗವಹಿಸಿದರು.

​ತಮ್ಮ ಮತದಾರರ ಗುರುತಿನ ಚೀಟಿಯ ಪರಿಷ್ಕರಣೆಗೆ ಸಂಬಂಧಿಸಿದ ನಿಗದಿತ ಫಾರ್ಮ್ ಅನ್ನು ಭರ್ತಿ ಮಾಡಿದ ಸಂಸದರು, ಅದನ್ನು ತಮ್ಮ ಭಾಗದ ಬಿಎಲ್‌ಒ (BLO) ಅಧಿಕಾರಿಗಳಿಗೆ ಅಧಿಕೃತವಾಗಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿರಸಿ ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್ ಅವರು ಉಪಸ್ಥಿತರಿದ್ದರು.

​ಈ ವೇಳೆ ಮಾತನಾಡಿದ ಸಂಸದರು, “ಮತದಾನ ಮಾಡುವುದು ನಮ್ಮ ಹಕ್ಕು ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವೂ ಹೌದು. ಸಾರ್ವಜನಿಕರು ಈ ಮತದಾರ ಪಟ್ಟಿ ವಿಶೇಷ ಪರಿಷ್ಕರಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿ, ಬಿಎಲ್‌ಒ ಅಧಿಕಾರಿಗಳಿಗೆ ಸೂಕ್ತ ದಾಖಲೆಗಳನ್ನು ಒದಗಿಸುವ ಮೂಲಕ ಸಹಕರಿಸಬೇಕು. ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು” ಎಂದು ಈ ಮೂಲಕ ಕರೆ ನೀಡಿದರು. ಈ ಪ್ರಕಟಣೆ ಯನ್ನು ಸಂಸದರೆ ಕಾರ್ಯಲಯ ದಿಂದ ಕಳುಹಿಸಲಾಗಿದೆ.