ಸುದ್ದಿ ಕನ್ನಡ ವಾರ್ತೆ
ತುಮಕೂರು/ಅಂಕೋಲಾ: ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಸಮೀಪ ಶನಿವಾರ ವಿಚಿತ್ರ ಹಾಗೂ ಆತಂಕಕಾರಿ ಘಟನೆ ನಡೆದಿದೆ. ಯುವತಿಯನ್ನು ಅಪಹರಿಸಿ ಕಾರಿನಲ್ಲಿ ಕರೆದೊಯ್ಯುತ್ತಿದ್ದನೆಂದು ಆರೋಪಿಸಲ್ಪಟ್ಟ ಯುವಕ, ಪ್ರಯಾಣದ ಮಧ್ಯೆ ತನ್ನ ಬಳಿ ಇದ್ದ ನಾಡಬಾಂಬ್ ಸ್ಫೋಟಿಸಿಕೊಂಡ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಕಾರಿನಲ್ಲಿದ್ದ ಯುವತಿ ಹಾಗೂ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಯುವಕ ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಕಾರು ಹಾನಿಗೊಳಗಾಗಿದ್ದು, ಸ್ಥಳಕ್ಕೆ ಪೊಲೀಸರು ಹಾಗೂ ವಿಧಿವಿಜ್ಞಾನ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಘಟನೆಯ ವಿವರ: ಪ್ರೇಯಸಿಯನ್ನು ಬೆದರಿಸಿ ಮದುವೆಗೆ ಒತ್ತಾಯಿಸಲು ಕಾರಿನಲ್ಲೇ ಕಚ್ಚಾ ಬಾಂಬ್ ಸ್ಫೋಟಿಸಿಕೊಂಡ ಯುವಕ ತಾನೇ ಸುಟ್ಟು ಕರಕಲಾದ ಭೀಕರ ಘಟನೆ ತುಮಕೂರಿನ ಜೋಗಿಹಳ್ಳಿ ಸಮೀಪ ಶನಿವಾರ ನಡೆದಿದೆ.
ಅಂಕೋಲಾ ತಾಲೂಕಿನ ಹೆಬ್ಬುಳ್ಳ ಸಮೀಪದ ರಾಜನಗುಳಿಯ ನಾಗೇಂದ್ರ ತಿಮ್ಮಪ್ಪ ಗೌಡ (28) ಮೃತ ಯುವಕ. ಸರಳೇಬೈಲಿನ ರಮ್ಯಾ ಉಲ್ಲಾಸ ನಾಯಕ ಗಾಯಗೊಂಡವಳು.
ರಮ್ಯಾ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಓ.ಟಿ. ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಳು. ಕಾಲೇಜು ದಿನಗಳಿಂದಲೇ ನಾಗೇಂದ್ರ ಮತ್ತು ರಮ್ಯಾ ನಡುವೆ ಪ್ರೇಮ ಸಂಬಂಧವಿತ್ತು. ಆದರೆ ಮದುವೆಗೆ ರಮ್ಯಾ ಒಪ್ಪದಿದ್ದ ಹಿನ್ನೆಲೆಯಲ್ಲಿ ನಾಗೇಂದ್ರ ಹಲವು ದಿನಗಳಿಂದ ಆಕೆಯನ್ನು ಕಾಡುತ್ತಿದ್ದಾನೆ ಎನ್ನಲಾಗಿದೆ. ಕೊನೆಗೆ ಆತನ ಕರೆಗಳನ್ನು ರಮ್ಯಾ ಬ್ಲಾಕ್ ಮಾಡಿದ್ದಳು.
ತಡರಾತ್ರಿ ಅಂಕೋಲಾದ ಹೆಬ್ಬುಳ್ಳನಿಂದ ಬಿಟ್ಟು ಬೆಂಗಳೂರಿಗೆ ಶನಿವಾರ ಬೆಳಿಗ್ಗೆ 7 ಗಂಟೆಗೆ ರಮ್ಯಾ ರೂಂ ಮುಂದೆ ನಾಗೇಂದ್ರ ಪ್ರತ್ಯಕ್ಷನಾಗಿದ್ದ. ಇಬ್ಬರು ಊಬರ್ ಕ್ಯಾಬ್ ಅನ್ನು ಬುಕ್ ಮಾಡಿಕೊಂಡು ಬೆಂಗಳೂರಿನ ಜಯನಗರದಿಂದ ಅಂಕೋಲಾಗೆ ಬರುತ್ತಿದ್ದರು. ಈ ವೇಳೆ ತುಮಕೂರು ಬಳಿ ಕಾರಿನಲ್ಲಿ ಇಬ್ಬರೂ ಜಗಳವಾಡಿಕೊಂಡಿದ್ದಾರೆ. ಆಗ ಯುವತಿಯ ತಲೆಗೆ ಚಾಕುವಿನಿಂದ ಚುಚ್ಚಿದ್ದಾನೆ. ಆಗ ರಮ್ಯಾ ಕಾರಿನಿಂದ ಕೆಳಗೆ ಹಾರಿದ್ದಳು.
ಕೂಡಲೇ ಕಾರಿನ ಚಾಲಕ ರಸ್ತೆ ಪಕ್ಕಕ್ಕೆ ವಾಹನ ನಿಲ್ಲಿಸಿ ರಸ್ತೆಯಲ್ಲಿ ಬಿದ್ದಿದ್ದ ರಮ್ಯಾಳನ್ನು ನೋಡಲು ಹೋದಾಗ ಕಾರ್ ಲಾಕ್ ಮಾಡಿಕೊಂಡ ನಾಗೇಂದ್ರ, ಪೆಟ್ರೋಲ್ ಬಾಂಬ್ ಸಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಕ್ಷಣ ಮಾತ್ರದಲ್ಲಿ ನಾಗೇಂದ್ರ ಕಾರಿನಲ್ಲಿ ಸುಟ್ಟು ಕರಕಲಾಗಿದ್ದಾನೆ.
ನಾಗೇಂದ್ರ, ಮೊದಲೇ ಪ್ಲಾನ್ ಮಾಡಿ ಪೆಟ್ರೋಲ್ ಬಾಂಬ್ ಜೊತೆಯಲ್ಲಿ ತಂದಿರುವ ಅನುಮಾನ ವ್ಯಕ್ತವಾಗಿದ್ದು ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡ ಯುವತಿ ರಮ್ಯಾಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನನ್ನನ್ನು ಒತ್ತಾಯ ಪೂರ್ವಕವಾಗಿ ಕಿಡ್ನ್ಯಾಪ್ ಮಾಡಿಕೊಂಡು ಬಂದು ನಾಗೇಂದ್ರ ಈ ರೀತಿ ಕೃತ್ಯ ಎಸಗಿದ್ದಾನೆ ಎಂದು ರಮ್ಯಾ ಪೊಲೀಸ್ ವಿಚಾರಣೆಯ ವೇಳೆ ತಿಳಿಸಿದ್ದಾಳೆ.
