ಸುದ್ದಿ ಕನ್ನಡ ವಾರ್ತೆ
ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜು, ಗೋರೆಯಲ್ಲಿ ಪರಮಪೂಜ್ಯ ಶ್ರೀ ಯೋಗತ್ಮಾನಂದ ಸ್ವಾಮೀಜಿಯವರಿಂದ ಭಗವದ್ಗೀತೆಯ ಜೀವನ ಸಂದೇಶಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಜಿ. ಜಿ. ಹೆಗಡೆಯವರು ಪರಮಪೂಜ್ಯ ಶ್ರೀ ಯೋಗತ್ಮಾನಂದ ಸ್ವಾಮೀಜಿಯವರನ್ನು ಭಕ್ತಿ ಪೂರ್ವಕವಾಗಿ ತುಳಸಿ ದಳಗಳನ್ನು ಅರ್ಪಿಸಿ ಬರಮಾಡಿಕೊಂಡರು. ಕಾಲೇಜಿನ ವಿದ್ಯಾರ್ಥಿಗಳಿಂದ ಸಾಮೂಹಿಕ ಭಗವದ್ಗೀತಾ ಪಠಣ ನಡೆಯಿತು. ಬಳಿಕ ಮಾತನಾಡಿದ ಸ್ವಾಮೀಜಿಯವರು ಭಗವದ್ಗೀತೆ ಮಾನವನ ಬದುಕಿಗೆ ದಾರಿದೀಪವಾಗಿದ್ದು, ಅದರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ನೆಮ್ಮದಿ ಮತ್ತು ಯಶಸ್ಸು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ತಮ್ಮ ಉಪನ್ಯಾಸದಲ್ಲಿ ಸ್ವಾಮೀಜಿಯವರು ಸತ್–ಚಿತ್–ಆನಂದದ ಪರಿಕಲ್ಪನೆಯನ್ನು ವಿವರಿಸುತ್ತಾ, ಮಾನವನ ನಿಜಸ್ವರೂಪವು ಸತ್ಯ, ಚೈತನ್ಯ ಮತ್ತು ಆನಂದಮಯವಾಗಿದ್ದು, ಅದನ್ನು ಅರಿತು ಬದುಕುವುದು ಜೀವನದ ಪರಮ ಗುರಿಯಾಗಿದೆ ಎಂದು ಹೇಳಿದರು. ರಾಗ–ದ್ವೇಷಗಳನ್ನು ಮೀರಿ ಸಾಮರಸ್ಯದ ಬದುಕು ನಡೆಸಿದಾಗ ಎಲ್ಲರೂ ಭಗವಂತನಲ್ಲಿ ಒಂದಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಭಗವಂತನಲ್ಲಿ ಏಕತ್ವವನ್ನು ಅನುಭವಿಸಲು ಏಕಾಗ್ರತೆ ಅತ್ಯವಶ್ಯಕವಾಗಿದ್ದು, ‘ನಾನು’ ಎಂಬ ಅಹಂಕಾರವನ್ನು ತೊರೆದು, ತಾನು ಮಾಡುವ ಪ್ರತಿಯೊಂದು ಕಾರ್ಯದ ಫಲವನ್ನು ಪರಮಾತ್ಮನಿಗೆ ಅರ್ಪಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಭೂತಕಾಲದ ಚಿಂತೆಯನ್ನಾಗಲಿ, ಭವಿಷ್ಯದ ಆತಂಕವನ್ನಾಗಲಿ ಮನಸ್ಸಿನಲ್ಲಿ ಇಟ್ಟುಕೊಳ್ಳದೆ, ವರ್ತಮಾನದಲ್ಲಿ ಬದುಕುವುದೇ ಜೀವನದ ಯಶಸ್ಸಿನ ಗುಟ್ಟು ಎಂದು ಅವರು ತಿಳಿಸಿದರು.
ಜೀವನದಲ್ಲಿ ಉತ್ಸಾಹ, ಆತ್ಮವಿಶ್ವಾಸ ಹಾಗೂ ಕರ್ತವ್ಯನಿಷ್ಠೆಯನ್ನು ಉಳಿಸಿಕೊಂಡು, ಸಿದ್ಧಿ–ಅಸಿದ್ಧಿಗಳನ್ನು ಸಮಚಿತ್ತದಿಂದ ಸ್ವೀಕರಿಸುವುದು ಭಗವದ್ಗೀತೆಯ ಮಹತ್ವದ ಸಂದೇಶವಾಗಿದೆ ಎಂದು ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ಉದಾಹರಣೆಗಳೊಂದಿಗೆ ವಿವರಿಸಿದರು. ಸ್ವಾಮೀಜಿಯವರ ಪ್ರೇರಣಾದಾಯಕ ಮಾತುಗಳು ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯಗಳ ಬಗ್ಗೆ ಹೊಸ ಚಿಂತನೆ ಮೂಡಿಸಿದವು.
ಕಾರ್ಯಕ್ರಮದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಭುವನಾ ಹೆಗಡೆ’ಭಗವದ್ಗೀತೆಯಿಂದ ಸಾಮಾಜಿಕ ಸಾಮರಸ್ಯ’ಎಂಬ ವಿಷಯದ ಕುರಿತು ಭಾಷಣವನ್ನು ಪ್ರಸ್ತುತಪಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾದಳು. ಸಂಸ್ಥಾಪಕ ಅಧ್ಯಕ್ಷರಾದ ಡಾ. ಜಿ. ಜಿ. ಹೆಗಡೆ, ಪ್ರಾಚಾರ್ಯರಾದ l ಕಿರಣ್ ಭಟ್ಟ ಹುತ್ಗಾರ್, ಆಡಳಿತಾಧಿಕಾರಿಗಳಾದ ಶಶಾಂಕ್ ಶಾಸ್ತ್ರಿ, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ಪೂಜಾ ಭಟ್ಟ ನಿರೂಪಿಸಿದರು. ಪರಮಪೂಜ್ಯಶ್ರೀಗಳು ವಿದ್ಯಾರ್ಥಿಗಳಿಗೆ ಫಲವನ್ನು ನೀಡಿ ಆಶೀರ್ವದಿಸಿದರು.
