ಸುದ್ದಿ ಕನ್ನಡ ವಾರ್ತೆ

ಬೆಂಗಳೂರು:.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಬಳಿದು ಅಪಮಾನವೆಸಗಿದ ಯುವಕನನ್ನು ಗ್ರಾಮಸ್ಥರು ಹಿಡಿದು, ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಮಸಣಾಪುರ ಗ್ರಾಮದಲ್ಲಿ‌ ನಡೆದಿದೆ.

ಗ್ರಾಮದ ಉಪ್ಪಾರ ಸಮುದಾಯದ ಶಿವಣ್ಣಶೆಟ್ಟಿ ಎಂಬುವವರ ಪುತ್ರ ಚಂದ್ರು (22) ಬಂಧಿತ ಆರೋಪಿ.
ಘಟನೆಯ ವಿವರ;
ಮಸಣಾಪುರ ಮತ್ತು ಚಾಟೀಪುರ ಗ್ರಾಮಗಳ ನಡುವೆ ಇರುವ ಮುಖ್ಯರಸ್ತೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್  ಭಾವಚಿತ್ರವಿರುವ ನಾಮಫಲಕಕ್ಕೆ ಭಾನುವಾರ ಮುಂಜಾನೆ 4 ಗಂಟೆಯ ಸಮಯದಲ್ಲಿ ಚಂದ್ರು ಎಂಬ ಯುವಕ ಸಗಣಿ ಬಳಿದು, ನಾಮಫಲದಲ್ಲಿ ಅಳವಡಿಸಿದ್ದ ಲೈಟ್ ಗಳನ್ನು ಹೊಡೆದು ಹಾಕಿದ್ದಾನೆ.

ಈ ಸಂದರ್ಭದಲ್ಲಿ ಶಬ್ಧವನ್ನು ಆಲಿಸಿದ ಗ್ರಾಮದ ಕೆಲವರು ಆತನನ್ನು ಹಿಡಿದು ಯಾಕೇ ಈಗೇ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಯುವಕ ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಅಲ್ಲದೇ, ಅಂಬೇಡ್ಕರ್ ನಾಮಫಲಕಕ್ಕೆ ಸಗಣಿಯನ್ನೂ ಬಳಿದಿದ್ದಾನೆ. ಈ ವೇಳೆ ಸಾರ್ವಜನಿಕರು ಮತ್ತು ಯುವಕನ ನಡುವೆ ಮಾತಿನ ಚಕಾಮಕಿ ನಡೆದು, ಸಾರ್ವಜನಿಕರು ಯುವಕನನ್ನು ಕಂಬಕ್ಕೆ ಕಟ್ಟಿಹಾಕಿ, ಆತನಿಗೆ ಚಪ್ಪಲಿ ಹಾರ ಹಾಕಿ ಹಲ್ಲೆ ನಡೆಸಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಸೇರಿದಂತೆ ಯಳಂದೂರು ಪಟ್ಟಣ ಠಾಣೆಯ ಪೊಲೀಸರು ಭೇಟಿ ನೀಡಿ ಗ್ರಾಮದಲ್ಲಿ ಬಿಗಿಬಂದೋಬಸ್ತ್ ಕೈಗೊಂಡು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.