ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ತಾಲೂಕಿನ ಜಗಲಬೆಟ್ ಬಳಿ ನಾಲ್ಕು ವಾಹನಗಳ ನಡುವೆ ಭೀಕರ ಸರಣಿ ಡಿಕ್ಕಿ ಸಂಭವಿಸಿದೆ. ಕಾರವಾರ–ರಾಮನಗರ ರಸ್ತೆಯ ಕೃಷ್ಣ ದೇವಸ್ಥಾನದ ಅಪಾಯಕಾರಿ ತಿರುವಿನಲ್ಲಿ ನಡೆದ ಈ ರಸ್ತೆ ದುರಂತದಲ್ಲಿ ಟಿಪ್ಪರ್ ಚಾಲಕ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು, ಮತ್ತೊಂದು ಕಡೆ ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ನಾಲ್ಕು ವಾಹನಗಳ ನಡುವೆ ಸರಣಿ ಡಿಕ್ಕಿ
ಮೂಲಗಳ ಪ್ರಕಾರ, ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿದ್ದ ನಿಸ್ಸಾನ್ ಕಾರು, ಬೊಲೆರೊ ಹಾಗೂ ಬೈಕ್ಗೆ ಒಂದರ ಹಿಂದೆ ಒಂದರಂತೆ ಭರ್ಜರಿಯಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ವಾಹನಗಳು ರಸ್ತೆ ಬದಿಗೆ ಉರುಳಿದ್ದು, ತೀವ್ರವಾಗಿ ಜಖಂಗೊಂಡಿವೆ. ಈ ಭೀಕರ ಅಪಘಾತದಲ್ಲಿ ಕುಮಟಾ ಮೂಲದ ಟಿಪ್ಪರ್ ಚಾಲಕ ಬಾಬು ಎಂಬುವವರು ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇಸತ್ತಿದ್ದಾರೆ.
7 ಮಂದಿಗೆ ಗಾಯ; ಕೆಲವರ ಸ್ಥಿತಿ ಗಂಭೀರ ವಾಗಿದೆ ಈ ಸರಣಿ ಅಪಘಾತದಲ್ಲಿ ವಿವಿಧ ವಾಹನಗಳಲ್ಲಿದ್ದ ಒಟ್ಟು ಏಳು ಜನರಿಗೆ ಸಣ್ಣಪುಟ್ಟ ಹಾಗೂ ಗಂಭೀರ ಸ್ವರೂಪದ ಗಾಯಗಳಾಗಿವೆ. ಅಪಘಾತದ ಸುದ್ದಿ ಕೇಳಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಹಾಗೂ ಪೊಲೀಸರು ಗಾಯಾಳುಗಳನ್ನು ರಕ್ಷಿಸಿ ಮೊದಲು ರಾಮನಗರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಗಾಯಾಳುಗಳ ಪೈಕಿ ಕೆಲವರ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿರುವ ಹಿನ್ನೆಲೆಯಲ್ಲಿ, ಹೆಚ್ಚಿನ ತುರ್ತು ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆ ಹಾಗೂ ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಜಗಲಬೆಟ್ ಸಮೀಪ ನಡೆದ ಈ ಭೀಕರ ಅಪಘಾತದಿಂದಾಗಿ ಕಾರವಾರ–ರಾಮನಗರ ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಕೆಲಕಾಲ ಭಾರಿ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ರಾಮನಗರ ಪಿಎಸ್ಐ ಮಹಾಂತೇಶ್ ನಾಯಕ ಪೊಲೀಸ್ ಠಾಣೆಯ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು, ಹಾಗೂ ಅಪಘಾತಕ್ಕೀಡಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
