ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಕರಂಜೋಯಡಾ- ವಾಗೇಲಿ ಮಾರ್ಗದಲ್ಲಿ ಸಂಚರಿಸುತ್ತಿರುವ ಬಸ್ನಲ್ಲಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಬುಧವಾರ ಜೋಯಿಡಾದಿಂದ ಹೊರಟ ಬಸ್ ಕಿರವತ್ತಿ ತಲುಪುವಷ್ಟರಲ್ಲೇ ಸಂಪೂರ್ಣ ಭರ್ತಿಯಾಗಿತ್ತು. ಮುಡಿಯೇ ಕರಂಜೋಯಡಾ, ಕಸಂಬಾ, ಕಾರ್ಟೋಳಿ, ಖಾನಗಾಂವ ಹಾಗೂ ವಾಗೇಲಿ ಭಾಗದ ಸುಮಾರು 15ಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್ನಲ್ಲಿ ಸ್ಥಳಾವಕಾಶ ದೊರೆಯದೇ ಸಂಕಷ್ಟ ಎದುರಾಯಿತು. ಪರಿಣಾಮವಾಗಿ ಕೆಲ ವಿದ್ಯಾರ್ಥಿಗಳನ್ನು ಅವರ ಪಾಲಕರು ಬೈಕ್ಗಳ ಮೂಲಕ ಮನೆಗೆ ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಈ ಕುರಿತು ಸ್ಥಳೀಯರು ಹಾಗೂ ಸಾರ್ವಜನಿಕರು ದಾಂಡೇಲಿ ಡಿಪೋ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಾಗೇಲಿ ಮಾರ್ಗಕ್ಕೆ ದೊಡ್ಡ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, “ಪ್ರಸ್ತುತ ಈ ಮಾರ್ಗದಲ್ಲಿ ಸಂಚರಿಸುವ ಮಿನಿ ಬಸ್ ದುರಸ್ತಿ ಕಾರ್ಯದಲ್ಲಿದೆ. ಕೆಲ ಸಂದರ್ಭಗಳಲ್ಲಿ ದೊಡ್ಡ ಬಸ್ಸು ಕಳುಹಿಸುತ್ತಿದ್ದೇವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಶಾಶ್ವತವಾಗಿ ದೊಡ್ಡ ಬಸ್ ವ್ಯವಸ್ಥೆ ಮಾಡುವುದು ಸಾಧ್ಯವಾಗುತ್ತಿಲ್ಲ” ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.ಪ್ರಸ್ತುತ ಈ ಮಾರ್ಗದಲ್ಲಿ ಸಂಚರಿಸುತ್ತಿರುವ ಸಣ್ಣ ಬಸ್ನಲ್ಲಿ ಸುಮಾರು 32 ಆಸನಗಳಿದ್ದು, ಸುರಕ್ಷತಾ ನಿಯಮಗಳ ಪ್ರಕಾರ 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಿಸಬಾರದು. ಆದರೆ ಬುಧವಾರ ಬಸ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರಿಂದ ಬಸ್ ಸಂಪೂರ್ಣ ತುಂಬಿ ಹೋಗಿತ್ತು. ಇದರ ಪರಿಣಾಮವಾಗಿ ಅನೇಕ ವಿದ್ಯಾರ್ಥಿಗಳಿಗೆ ಬಸ್ನಲ್ಲಿ ಪ್ರಯಾಣಿಸಲು ಅವಕಾಶ ದೊರೆಯಲಿಲ್ಲ.
ವಾಗೇಲಿ, ಖಾನಗಾಂವ, ಕಾರ್ಟೋಳಿ, ಕಸಂಬಾ, ಕರಂಜೋಯಡಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಪ್ರತಿದಿನ ಇದೇ ಬಸ್ಸನ್ನು ಅವಲಂಬಿಸಿ ಶಾಲಾ- ಕಾಲೇಜುಗಳಿಗೆ ತೆರಳುತ್ತಿದ್ದಾರೆ. ವಿದ್ಯಾರ್ಥಿಗಳ ಶಿಕ್ಷಣದ ಭವಿಷ್ಯದ ದೃಷ್ಟಿಯಿಂದ ತೊಂದರೆಯಾಗದಂತೆ ಹಾಗೂ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಶಾಲಾ-ಕಾಲೇಜು ವೇಳೆಯಲ್ಲಿ ದೊಡ್ಡ ಬಸ್ಸಿನ ವ್ಯವಸ್ಥೆ ಕಲ್ಪಿಸುವಂತೆ ಪಾಲಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಾರಿಗೆ ಇಲಾಖೆಯನ್ನು ಒತ್ತಾಯಿಸಿದ್ದಾರೆ.ಈ ಬಗ್ಗೆ ಸಾರಿಗೆ ಇಲಾಖೆ ತುರ್ತು ಕ್ರಮ ಕೈಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.
