ಸುದ್ದಿ ಕನ್ನಡ ವಾರ್ತೆ
ಅಂಕೋಲಾ: ತಾಲೂಕಿನ ಹಾರವಾಡ ಸಮೀಪದ ವಿಷ್ಣು ನಾಯ್ಕ ಅವರ ಮನೆಯಲ್ಲಿ ಬುಧವಾರ ಹೆಬ್ಬಾವು ಕೋಳಿ ಗೂಡಿನಲ್ಲಿ ನುಗ್ಗಿ ಸುಮಾರು ಎರಡು ಕೋಳಿಗಳನ್ನು ತಿಂದು ಕುಳಿತಿದ್ದ ಘಟನೆ ಬೆಳಕಿಗೆ ಬಂದಿದೆ.
ಮನೆಯವರು ಕೋಳಿಗೂಡಿನಲ್ಲಿ ಹೆಬ್ಬಾವು ಇರುವುದನ್ನು ಗಮನಿಸಿ ಆತಂಕಗೊಂಡು ಸ್ಥಳೀಯ ಉರಗ ಸಂರಕ್ಷಕ ಪ್ರಶಾಂತ ಕಳಸ ಅವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ತಕ್ಷಣ ಸ್ಥಳಕ್ಕಾಗಮಿಸಿದ ಪ್ರಶಾಂತ ಕಳಸ,ಸ್ಥಳೀಯರ ಸಹಕಾರದೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಎಚ್ಚರಿಕೆಯಿಂದ ಹೆಬ್ಬಾವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಸುರಕ್ಷಿತವಾಗಿ ಸೆರೆಹಿಡಿಯಲಾಯಿತು.
ಬಳಿಕ ಅರಣ್ಯ ಪ್ರದೇಶದಲ್ಲಿ ಪ್ರಕೃತಿಗೆ ಮರಳಿ ಬಿಡುವ ಮೂಲಕ ಯಶಸ್ವಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಹೆಬ್ಬಾವುಗಳಿಗೆ ಯಾವುದೇ ಹಾನಿ ಮಾಡದೆ ಉರಗ ಸಂರಕ್ಷಕರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
