ಸುದ್ದಿ ಕನ್ನಡ ವಾರ್ತೆ
ಕೇಂದ್ರ ರೈಲ್ವೆ ಸಚಿವರು ಬೆಂಗಳೂರಿನಲ್ಲಿ ನೀಡಿದ ಪತ್ರಿಕಾ ಹೇಳಿಕೆಯಂತೆ, ಪ್ರಸ್ತಾವಿತ ಬೆಂಗಳೂರು – ಮಡಗಾಂವ್ ವಂದೇ ಭಾರತ್ ರೈಲು ಬೆಂಗಳೂರಿನಿಂದ ಹೊರಟು ಪಡೀಲ್ ಬೈಪಾಸ್ ಮೂಲಕ ಉಡುಪಿ, ಕಾರವಾರವನ್ನು ತಲುಪಿ, ಅಲ್ಲಿಂದ ಮಡಗಾಂವ್‌ಗೆ ಸಂಚರಿಸಲಿದೆ. ಆದ್ದರಿಂದ ಈ ಕುರಿತು ಸಾರ್ವಜನಿಕರು ಯಾವುದೇ ರೀತಿಯ ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ ಎಂದು ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
​ಮಂಗಳೂರು ಕರಾವಳಿಯ ಆರಂಭಿಕ ನಗರವಾಗಿದೆ. ಆದರೆ, ಶಿಕ್ಷಣ ಕಾಶಿ ಉಡುಪಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಕುಂದಾಪುರ, ಪವಿತ್ರ ಪ್ರವಾಸಿ ತಾಣಗಳಾದ ಮುರುಡೇಶ್ವರ, ಗೋಕರ್ಣ ಹಾಗೂ ರಕ್ಷಣಾ ನೆಲೆಯಾಗಿರುವ ಕಾರವಾರಕ್ಕೆ ಬೆಂಗಳೂರಿನಿಂದ ವಂದೇ ಭಾರತ್ ರೈಲಿನ ನೇರ ಸಂಪರ್ಕ ಸಿಕ್ಕಾಗ ಮಾತ್ರ ಸಮಗ್ರ ಕರಾವಳಿ ಭಾಗಕ್ಕೆ ನಿಜವಾದ ಅನುಕೂಲವಾಗಲಿದೆ. ಇಡೀ ಕರಾವಳಿ ತೀರವನ್ನು ರಾಜಧಾನಿ ಬೆಂಗಳೂರಿನೊಂದಿಗೆ ವಂದೇ ಭಾರತ್ ಮೂಲಕ ಜೋಡಿಸುವುದೇ ಭಾರತ ಸರ್ಕಾರದ ಮುಖ್ಯ ಉದ್ದೇಶವಾಗಿದ್ದು, ಈ ಬಗ್ಗೆ ಯಾವುದೇ ಸಂಶಯಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

​ಈಗಾಗಲೇ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರೊಂದಿಗೆ ಮಾತುಕತೆ ನಡೆಸಿ ಖಚಿತ ಭರವಸೆ ಪಡೆಯಲಾಗಿದೆ. ಅಲ್ಲದೆ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೂ ಈ ಕುರಿತು ಸಮಾಲೋಚನೆ ನಡೆಸಲಾಗಿದೆ ಎಂದು ಸಂಸದರು ಹೇಳಿದ್ದಾರೆ.

​ಘಾಟ್ ಪ್ರದೇಶದಲ್ಲಿ ಕರಾವಳಿ ಭಾಗದ ರೈಲುಗಳು ತೀರಾ ನಿಧಾನಗತಿಯಲ್ಲಿ ಚಲಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅತ್ಯಂತ ವೇಗದ ಹಾಗೂ ನೇರ ಮಾರ್ಗದಲ್ಲೇ ಬೆಂಗಳೂರು-ಕರಾವಳಿ ರೈಲುಗಳು ಸಂಚರಿಸಬೇಕಾಗಿದೆ. ಮಂಗಳೂರು ಸೆಂಟ್ರಲ್ ಅಥವಾ ಜಂಕ್ಷನ್ ನಿಲ್ದಾಣಗಳಿಗೆ ಅನಗತ್ಯವಾಗಿ ಸುತ್ತಿ ಬಳಸಿ ಹೋಗುವುದನ್ನು ಮತ್ತು ಅಲ್ಲಿ ಇಂಜಿನ್ ಬದಲಾಯಿಸುವ ಸಮಯದ ವ್ಯಯವನ್ನು ತಪ್ಪಿಸಲು, ‘ಪಡೀಲ್ ಬೈಪಾಸ್’ ನೇರ ಮಾರ್ಗವನ್ನು ಅಭಿವೃದ್ಧಿಪಡಿಸುವಂತೆ ರೈಲ್ವೆ ಇಲಾಖೆಗೆ ಮಹತ್ವದ ಸಲಹೆ ನೀಡಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಯವರ ಕಾರ್ಯಲಯ ದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.