ಸುದ್ದಿ ಕನ್ನಡ ವಾರ್ತೆ
ದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದಿಂದ ಉಂಟಾಗಬಹುದಾದ ಜಾಗತಿಕ ಆರ್ಥಿಕ ತಲ್ಲಣಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಗುರುವಾರ ತಮ್ಮ ಸಚಿವ ಸಂಪುಟಕ್ಕೆ ಮೂರು ಪ್ರಮುಖ ಸಂದೇಶಗಳನ್ನು ನೀಡಿದ್ದಾರೆ.
ಸಂದೇಶ 1:ಆಡಳಿತದಲ್ಲಿ ವೇಗ ಮತ್ತು ಪಾರದರ್ಶಕತೆ.
ಸರ್ಕಾರಿ ಕಡತಗಳು ಒಂದೇ ಟೇಬಲ್‌ನಿಂದ ಮತ್ತೊಂದು ಟೇಬಲ್‌ಗೆ ಅನಗತ್ಯವಾಗಿ ಅಲೆಯಬಾರದು ಎಂದು ಮೋದಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಸರಳಗೊಳಿಸಿ, ಪಾರದರ್ಶಕತೆ ಕಾಯ್ದುಕೊಂಡು ನಾಗರಿಕರ ಸುಲಭ ಜೀವನ ಸುಧಾರಿಸುವತ್ತ ಗಮನಹರಿಸಬೇಕು. ಹಳೆಯ ಸಾಧನೆಗಳ ಬೆನ್ನು ತಟ್ಟಿಕೊಳ್ಳುವ ಬದಲು ಭವಿಷ್ಯದ ಹೊಸ ಗುರಿಗಳತ್ತ ಸಚಿವರು ತಕ್ಷಣ ಗಮನ ಹರಿಸಬೇಕು ಎಂದು ಸೂಚಿಸಿದರು.
ಸಂದೇಶ 2: ಇಂಧನ ಭದ್ರತೆ:ಜಗತ್ತಿನ ಐದನೇ ಒಂದು ಭಾಗದಷ್ಟು ತೈಲ ಪೂರೈಕೆಯಾಗುವ ಹೊರ್ಮುಜ್ ಜಲಸಂಧಿಯ ಮಾರ್ಗದಲ್ಲಿ ಅಡಚಣೆ ಉಂಟಾಗಿರುವುದರಿಂದ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಈಗಾಗಲೇ ಪ್ರತಿ ಲೀಟರ್‌ಗೆ ಸುಮಾರು 4 ರುಪಾಯಿಯಷ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬಯೋಗ್ಯಾಸ್ ಮತ್ತು ನವೀಕರಿಸಬಹುದಾದ ಇಂಧನದಂತಹ ಪರ್ಯಾಯ ಮೂಲಗಳನ್ನು ತುರ್ತಾಗಿ ಹುಡುಕಲು ಮೋದಿ ಸೂಚಿಸಿದರು. ಜತೆಗೆ ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಲು ಕಠಿಣ ಆರ್ಥಿಕ ಶಿಸ್ತಿಗೆ ಮನವಿ ಮಾಡಿದರು.
ಸಂದೇಶ 3: ವಿಕಸಿತ ಭಾರತ 2047 ಬದ್ಧತೆ: ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ವಿಕಸಿತ ಭಾರತ ಕೇವಲ ಒಂದು ಘೋಷಣೆಯಾಗಬಾರದು, ಅದು ನಮ್ಮ ಕಡ್ಡಾಯ ಬದ್ಧತೆಯಾಗಬೇಕು ಎಂದು ಪ್ರಧಾನಿ ಹೇಳಿದರು. ಜನರ ಜೀವನವನ್ನು ನೇರವಾಗಿ ಸುಧಾರಿಸುವ ಮತ್ತು ಕಲ್ಯಾಣ ಯೋಜನೆಗಳನ್ನು ತಲುಪಿಸುವ ಮುಂದಿನ ಪೀಳಿಗೆಯ ಸುಧಾರಣೆಗಳ ಕಡೆಗೆ ಸಚಿವರು ಗಮನ ಹರಿಸಬೇಕು ಎಂದು ತಿಳಿಸಿದರು.
