ಸುದ್ದಿ ಕನ್ನಡ ವಾರ್ತೆ

ಮಂಗಳೂರು : ಶೈಕ್ಷಣಿಕ ನಗರಿ ಮಂಗಳೂರಿನಲ್ಲಿ ಮಾದಕ ದ್ರವ್ಯ ಜಾಲದ ವಿರುದ್ಧ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಭಾರಿ ಮೌಲ್ಯದ ಹೈಡ್ರೋವಿಡ್ (Hydrovid) ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.

ದಿನಾಂಕ 12-05-2026 ರಂದು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮುಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಮಾದಕ ದ್ರವ್ಯ ಮಾರಾಟದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪಣಂಬೂರು ಎಸಿಪಿ ತಂಡ ಹಾಗೂ ಮುಲ್ಕಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿತೆಯನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿತೆಯ ಮಾಹಿತಿ
ಬಂಧಿತ ಯುವತಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿದೇವರ ಬನ ನಿವಾಸಿ ದಿ. ಮಹಮ್ಮದ್‌ ಗೌಸ್‌ ಅವರ ಮಗಳು ಸುಹಾನಾ (21 ವರ್ಷ) ಎಂದು ಗುರುತಿಸಲಾಗಿದೆ. ಈಕೆ ಕುಂದಾಪುರದ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿ.ಸಿ.ಎ (BCA) ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.

ಬಂಧಿತಳಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹೈಡ್ರೋವಿಡ್ ಗಾಂಜಾ ಸುಮಾರು 1 ಕೆಜಿ 42 ಗ್ರಾಂ (ಅಂದಾಜು ಮಾರುಕಟ್ಟೆ ಮೌಲ್ಯ ₹35,00,000/-). ಮತ್ತು ಕೃತ್ಯಕ್ಕೆ ಬಳಸಲಾದ ಮೊಬೈಲ್ ಫೋನ್ ಮತ್ತು ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ

ಬಂಧಿತ ಸುಹಾನಾ ಈ ಹಿಂದೆಯೂ ಇಂತಹದೇ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಈಕೆಯ ಮೇಲೆ ಈಗಾಗಲೇ ಕಾವೂರು ಪೊಲೀಸ್ ಠಾಣೆ: ಅ. ಕ್ರ 37/2026 (NDPS ಕಾಯ್ದೆಯಡಿ). ಮತ್ತು ಬೆಂಗಳೂರು ವಿಮಾನ ನಿಲ್ದಾಣ ಕಸ್ಟಮ್ಸ್: O. R No: 177/2025-26 (NDPS ಕಾಯ್ದೆಯ ವಿವಿಧ ಕಲಂ ಅಡಿ). ಪ್ರಕರಣಗಳು ದಾಖಲಾಗಿವೆ:

ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 32/2026, ಕಲಂ: 8(ಸಿ), 20(ಬಿ) NDPS ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.ಮಂಗಳೂರು ಪೊಲೀಸ್ ಕಮೀಷನರ್ ಅವರ ನಿರ್ದೇಶನದಂತೆ ನಡೆದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಣಂಬೂರು ಎಸಿಪಿ ಮತ್ತು ಮುಲ್ಕಿ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.