ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ತಾಲೂಕಿನ ಎಲ್.ಎಸ್.ಎಂ.ಪಿ. ಸಂಘವು ನಿಜವಾದ ಅರ್ಥದಲ್ಲಿ ರೈತರ ಬೆನ್ನೆಲುಬಾಗಿ ಕೆಲಸ ಮಾಡುತ್ತಿದೆ. ವನವಾಸಿ ಕಲ್ಯಾಣ ಸೇರಿದಂತೆ ಸಮಾಜದ ವಿವಿಧ ಸ್ತರಗಳಿಗೆ ಸಂಘ ನೀಡುತ್ತಿರುವ ಕೊಡುಗೆ ಅಪಾರ ಎಂದು ವಿಧಾನ ಸಿದ್ದಿ ಹೇಳಿದರು.
ಪಟ್ಟಣದ ಪ್ರಾಥಮಿಕ ಪತ್ತಿನ ವ್ಯವಸಾಯ ಸಹಕಾರಿ ಸಂಘದ ವಜ್ರ ಮಹೋತ್ಸವ ಮತ್ತು ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಇಂದು ಸಹಕಾರಿ ಸಂಘಗಳ ಬಗ್ಗೆ ಜಾಗೃತರಾಗಿದ್ದು, ಸಂಸ್ಥೆಯ ಯಶಸ್ಸಿನಲ್ಲಿ ಅವರ ಪಾತ್ರ ದೊಡ್ಡವಿದೆ ಎಂದರು.
ಟಿ.ಎಸ್.ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ,1,500 ರೂಪಾಯಿಗಳಿಂದ ಆರಂಭವಾದ ಈ ಸಂಸ್ಥೆ ಇಂದು 70 ಕೋಟಿ ಸಾಲ ನೀಡುವ ಮತ್ತು 40 ಕೋಟಿ ಠೇವಣಿ ಹೊಂದಿರುವ ಮಟ್ಟಕ್ಕೆ ಬೆಳೆದಿರುವುದು ಸದಸ್ಯರ ವಿಶ್ವಾಸಕ್ಕೆ ಸಾಕ್ಷಿ.
ಸಹಕಾರಿ ಕ್ಷೇತ್ರಗಳಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು ಮತ್ತು ರೈತರು ತಮ್ಮ ವ್ಯವಹಾರಗಳನ್ನು ಇಂತಹ ಸಹಕಾರಿ ಸಂಸ್ಥೆಗಳಲ್ಲೇ ನಡೆಸಬೇಕು ಎಂದು ಕರೆ ನೀಡಿದರು.
ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ್ ಕೋಣೆಮನೆ ಮಾತನಾಡಿ, ಜಿಲ್ಲೆಯ ಸಹಕಾರಿ ಕ್ಷೇತ್ರವು ರಾಜ್ಯದಲ್ಲೇ ಹೆಸರುವಾಸಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಮತ್ತು ಅನಾರೋಗ್ಯಕರ ಪೈಪೋಟಿ ನುಸುಳುತ್ತಿರುವುದು ವಿಷಾದನೀಯ. ಅಹಂ ಬಿಟ್ಟು ಉದಾರತನದಿಂದ ಮಾತ್ರ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನಾಗರಾಜ ಕವಡಿಕೇರಿ ಮಾತನಾಡಿ ವಜ್ರ ಮಹೋತ್ಸವವು ನಮ್ಮ ಸಂಸ್ಥೆಯ ಪಾಲಿಗೆ ಮಹತ್ತರ ಮೈಲಿಗಲ್ಲು, ಹಿರಿಯರು ಹಾಕಿಕೊಟ್ಟ ಭದ್ರ ಬುನಾದಿಯಿಂದ ಇಂದು ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ರೈತರ ಹಿತರಕ್ಷಣೆಗಾಗಿ ನಾವು ಸದಾ ಕಟಿಬದ್ಧರಾಗಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಸಂಕಲ್ಪ ಸಂಸ್ಥೆಯ ಪ್ರಮೋದ ಹೆಗಡೆ,ವಿವಿಧ ಸಹಕಾರಿ ಪ್ರಮುಖರಾದ ಎಂ.ಆರ್. ಹೆಗಡೆ, ಉಮೇಶ್ ಭಾಗ್ವತ, ಆರ್.ಎಸ್. ಹೆಗಡೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ನರಸಿಂಹ ಕೋಣೆಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಟಿ.ಆರ್. ಹೆಗಡೆ ಸ್ವಾಗತಿಸಿದರು ಮತ್ತು ಮಹಾಬಲೇಶ್ವರ ಭಟ್ ವಂದಿಸಿದರು.