ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ ಜೀವನದಲ್ಲಿ ಪ್ರತಿಯೊಬ್ಬರೂ ನಾವು ಮಾಡಿದ ಉತ್ತಮ ಕಾರ್ಯಗಳು ಎಂದಿಗೂ ಜೀವಂತವಾಗಿ ಉಳಿದುಕೊಳ್ಳುತ್ತವೆ. ಇಂತಹ ಹಿರಿಯ ಕಲಾವಿದರ ಕುರಿತಾಗಿ ನಾವು ಇಂದು ತಿಳಿದುಕೊಳ್ಳಲೇಬೇಕು. ಇದೇ ರೀತಿ ಕಲಾ ಸೇವೆ ಮಾಡಿದವರು ದಿ. ವಿಶ್ವೇಶ್ವರ ಶಂಕರ ಭಾಗ್ವತ ಹಬ್ನಗದ್ದೆ. ಅವರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳೋಣ.

ಯಕ್ಷಗಾನದಲ್ಲಿ ಪೋಷಕ ಪಾತ್ರಧಾರಿಯಾಗಿ, ಹವ್ಯಾಸಿ ಭಾಗವತರಾಗಿ, ನಾಟಕ ಕಲಾವಿದರಾಗಿ ವಿವಿಧ ನೆಲೆಯಲ್ಲಿ ಕಲಾ ಸೇವೆ ಮಾಡಿ ಮರೆಯಾದವರು ಯಲ್ಲಾಪುರ ತಾಲೂಕಿನ ಬರಬಳ್ಳಿ ಹಬ್ನಗದ್ದೆಯ ವಿಶ್ವೇಶ್ವರ ಶಂಕರ ಭಾಗ್ವತ.

ದಿ.ಶಂಕರ ಭಾಗ್ವತ ಹಾಗೂ ಪಾರ್ವತಿ ದಂಪತಿಯ ಪುತ್ರನಾಗಿ 1930 ರಲ್ಲಿ ಜನಿಸಿದರು. ಬರಬಳ್ಳಿಯಲ್ಲಿ ನಾಲ್ಕನೇ ತರಗತಿಯವರೆಗೆ ವಿದ್ಯಾಭ್ಯಾಸ ನಡೆಸಿ, ಕೃಷಿಯಲ್ಲಿ ತೊಡಗಿಸಿಕೊಂಡರು.

ಬರಬಳ್ಳಿಯ ಸಾಂಸ್ಕೃತಿಕ ವಾತಾವರಣದಿಂದಾಗಿ ಕಲೆಯ ಕುರಿತು ಅಪಾರ ಆಸಕ್ತಿ ಭಾಗ್ವತರಲ್ಲಿ ಮೂಡಲು ಕಾರಣವಾಯಿತು. ದಿ.ಗಜಾನನ ಭಟ್ಟ ಇಡಗುಂದಿ ಅವರಲ್ಲಿ ಯಕ್ಷಗಾನದ ಪ್ರಾಥಮಿಕ ಅಭ್ಯಾಸವೂ ಆಯಿತು.
ಬರಬಳ್ಳಿಯ ಸಮಾನ ಮನಸ್ಕ ಕಲಾವಿದರಿಂದ ಕೂಡಿದ ಶ್ರೀ ಮಹಾಗಣಪತಿ ಪ್ರಸಾದಿತ ಯಕ್ಷಗಾನ ಮಂಡಳಿಯ ಮೂಲಕ ಅನೇಕ ಪ್ರದರ್ಶನಗಳನ್ನು ನೀಡಿರುವುದನ್ನು ಇಂದಿಗೂ ಕಲಾಭಿಮಾನಿಗಳು ಸ್ಮರಿಸುತ್ತಾರೆ.

ಕೋಡಂಗಿ ವೇಷದಿಂದ ಆರಂಭವಾದ ಭಾಗವತರ ಕಲಾಯಾನ, ದೇವೇಂದ್ರ ಧರ್ಮರಾಯ, ನಾರದ ಮುಂತಾದ ಪೋಷಕ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುವ ಮಟ್ಟಿಗೆ ಬೆಳೆದರು. ಶಿವಪುರ, ವಜ್ರಳ್ಳಿ, ಬೀಗಾರ, ಬಾಗಿನಕಟ್ಟಾ, ದೇವಕಾರ ಮುಂತಾದೆಡೆ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿ, ಜನಮನ್ನಣೆ ಗಳಿಸಿದ್ದಾರೆ. ಕಲಾವಿದರಾಗಿ ಮಾತ್ರವಲ್ಲದೇ, ಸಂಘಟನೆಯಲ್ಲೂ ಅಷ್ಟೇ ಆಸಕ್ತಿ ಹೊಂದಿದ್ದರು.

ಭಾಗವತಿಕೆಯಲ್ಲೂ ಸೈ ಎನಿಸಿಕೊಂಡಿದ್ದ ವಿಶ್ವೇಶ್ವರ ಭಾಗವತರು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪದ್ಯ ಹೇಳುವುದರಲ್ಲಿ ಹೆಸರಾಗಿದ್ದರು. ಯಕ್ಷಗಾನ, ತಾಳಮದ್ದಲೆಗಳಲ್ಲಿ ಭಾಗವತಿಕೆ ಮಾಡದಿದ್ದರೂ, ದೇವರ ಸ್ತುತಿ, ತುಂಡು ಪದ್ಯಗಳನ್ನು ಹೇಳುವುದೇ ಅವರ ವಿಶೇಷತೆಯಾಗಿತ್ತು. ಬರಬಳ್ಳಿ ಭಾಗದಲ್ಲಿ ನಡೆಯುತ್ತಿದ್ದ ನಾಟಕಗಳಲ್ಲೂ ಪಾತ್ರ ನಿರ್ವಹಿಸಿದ್ದಾರೆ.

ಭಾಗವತರ ಸುಮಾರು 4 ದಶಕಗಳ ಕಲಾಯಾನಕ್ಕೆ ಪತ್ನಿ ಭವಾನಿ ಹಾಗೂ ಕುಟುಂಬದವರು ಸಹಕಾರ ನೀಡಿದ್ದಾರೆ. ತಮ್ಮ 66 ನೇ ವಯಸ್ಸಿನಲ್ಲಿ 21-3-1995 ರಂದು ನಿಧನರಾದರು.

ಭಾಗವತರ ಮಗ ಶ್ರೀ ಲಕ್ಷ್ಮೀನಾರಾಯಣ ಭಾಗ್ವತ (ಕುಂಕಿ) ಅವರೂ ಕಲೆಯ ಬಗ್ಗೆ ಅಪಾರ ಪ್ರೀತಿ ಹೊಂದಿದವರು. ತಮ್ಮ 15 ನೇ ವಯಸ್ಸಿನಲ್ಲಿ ಶ್ರೀ ರಾಮಕೃಷ್ಣ ಭಾಗ್ವತ ಕನಕನಹಳ್ಳಿ ಅವರಲ್ಲಿ ಯಕ್ಷಗಾನ ಭಾಗವತಿಕೆಯ ಪ್ರಾಥಮಿಕ ಅಭ್ಯಾಸ ಮಾಡಿದರು. ನಂತರ ದಿ.ಗಜಾನನ ಭಟ್ಟ ಹೊಸ್ತೋಟ, ಶ್ರೀ ಗಣಪತಿ ಭಾಗ್ವತ ಕವಾಳೆ ಅವರಲ್ಲೂ ಅಭ್ಯಸಿಸಿ, ಕೆಲ ಕಾಲ ಕಲಾ ಸೇವೆ ಮಾಡಿದ್ದಾರೆ. ನಂತರ ಕೌಟುಂಬಿಕ ಕಾರಣಗಳಿಂದಾಗಿ ಕಲಾಸೇವೆ ಮುಂದುವರಿಸಲಾಗದಿದ್ದರೂ, ಕಲಾಸಕ್ತಿಗೇನೂ ಕೊರತೆಯಿಲ್ಲ.

ಭಾಗ್ವತರ ಕುಟುಂಬಕ್ಕೆ ದೇವರು ಹೆಚ್ಚಿನ ಆಯುಷ್ಯ, ಆರೋಗ್ಯ ನೀಡಿ ಹರಸಲಿ ಎಂಬ ಪ್ರಾರ್ಥನೆ ನಮ್ಮದು.‌