ಸುದ್ದಿ ಕನ್ನಡ ವಾರ್ತೆ
ಬೆಂಗಳೂರು: ಆಗಸದಲ್ಲಿ ಹಾರಾಡುವಾಗಲೇ ತಾಂತ್ರಿಕ ದೋಷ
ಉಂಟಾದ ಕಾರಣ ವಿಮಾನವೊಂದು ಉತ್ತರಕನ್ನಡ, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಮೆಲೆ ಗಿರಕಿ ಹೊಡೆದು ಪ್ರಯಾಣಿಕರನ್ನು ಕಂಗಾಲಾಗಿಸಿದ ಘಟನೆ ನಡೆದಿದೆ.

ದೊಡ್ಡ ಮಟ್ಟದ ವಿಮಾನ ದುರಂತ ತಪ್ಪಿ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ.
ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿಗೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಫೈ 91 ಏರ್‌ಲೈನ್ಸ್‌ ನ ಐಸಿ 3401 ವಿಮಾನವು ಸಂಜೆ 4:30ರ ಹೊತ್ತಿಗೆ ಹುಬ್ಬಳ್ಳಿಗೆ ತಲುಪಬೇಕಾಗಿತ್ತು. ಎಟಿಆರ್ ಟರ್ಬೋಪ್ರಾಪ್ (ಎಟಿಇ7) ಮಾದರಿಯ ಈ ವಿಮಾನ ಹುಬ್ಬಳ್ಳಿಯನ್ನು ಸಮೀಪಿಸುತ್ತಿದ್ದಾಗಲೇ ಪೈಲಟ್‌ಗಳಿಗೆ ತಾಂತ್ರಿಕ ದೋಷ ಪತ್ತೆಯಾದ ಹಿನ್ನೆಲೆಯಲ್ಲಿ ಲ್ಯಾಂಡಿಂಗ್‌ನ್ನು ತಕ್ಷಣವೇ ರದ್ದುಪಡಿಸಲಾಯಿತು.
ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಹಾಗೂ ಸುರಕ್ಷಿತ ಪರಿಹಾರ ಕಂಡುಕೊಳ್ಳಲು ಸಿಬ್ಬಂದಿ ಪ್ರಯತ್ನಿಸುತ್ತಿರುವ ವೇಳೆ, ವಿಮಾನವು ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಭಾಗಗಳ ಮೇಲೆ ಸುಮಾರು ನಾಲ್ಕು ಗಂಟೆಗಳ ಕಾಲ ಗಿರಕಿ ಹೊಡೆದಿದೆ. ಈ ಅವಧಿಯಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಆತಂಕ ಹೆಚ್ಚಾಗಿ, ಕೆಲವರು ಪ್ರಾರ್ಥನೆಗೆ ಮೊರೆ ಹೋಗಿದ್ದರೆ, ಇನ್ನೂ ಕೆಲವರು ಭಯದಿಂದ ಕಣ್ಣೀರು ಹಾಕಿದರು ಎಂದು ವರದಿಯಾಗಿದೆ.
ವಿಮಾನದಲ್ಲಿದ್ದವರ ಕುಟುಂಬಸ್ಥರು ನಂತರ ಏರ್‌ಲೈನ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತುರ್ತು ಪರಿಸ್ಥಿತಿಯಲ್ಲಿಯೂ ಸಮರ್ಪಕ ಮಾಹಿತಿ ನೀಡಲಾಗಿಲ್ಲ ಎಂದು ಆರೋಪಿಸಿದ್ದಾರೆ.

ಕೊನೆಗೆ, ಉದ್ವಿಗ್ನ ಕ್ಷಣಗಳ ಬಳಿಕ ವಿಮಾನವನ್ನು ಹುಬ್ಬಳ್ಳಿಯಲ್ಲಿ ಇಳಿಸದೇ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಿ, ಸಂಜೆ ಸುಮಾರು 7:30ರ ಹೊತ್ತಿಗೆ ಸುರಕ್ಷಿತವಾಗಿ ಇಳಿಸಲಾಯಿತು. ಈ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ.