ಸುದ್ದಿ ಕನ್ನಡ ವಾರ್ತೆ
ಶಿರಸಿ:ನಗರದ ಕೆಎಚ್‌ಬಿ ಸಿಟಿ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಯನ್ನು ಚಾಲಕ ಮತ್ತು ನಿರ್ವಾಹಕರು ವಾರಸುದಾರರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಅಕ್ಷಯ ತೃತೀಯದ ನಿಮಿತ್ತ ನಗರದ ಕಾಮಧೇನು ಜ್ಯುವೆಲರ್ಸ್‌ನಲ್ಲಿ 82,000 ರೂಪಾಯಿ ಮೌಲ್ಯದ 5 ಗ್ರಾಂ ಚಿನ್ನದ ಗಟ್ಟಿ ಖರೀದಿಸಿದ್ದ ನಾಗವೇಣಿ ಗೌಡ ಎಂಬುವವರು, ಸಿಟಿ ಬಸ್ಸಿನಲ್ಲಿ ಕೆಎಚ್‌ಬಿ ಕಾಲೋನಿಗೆ ತೆರಳುವಾಗ ಆಕಸ್ಮಿಕವಾಗಿ ಚಿನ್ನವಿದ್ದ ಬ್ಯಾಗನ್ನು ಸೀಟಿನಲ್ಲೇ ಬಿಟ್ಟು ಇಳಿದಿದ್ದರು. ಇದನ್ನು ಗಮನಿಸಿದ ಬಸ್ ಚಾಲಕ ವೆಂಕಟರಮಣ ನಾಯ್ಕ ಮತ್ತು ನಿರ್ವಾಹಕ ರಮೇಶ ನಾಯ್ಕ ಅವರು ಬ್ಯಾಗನ್ನು ಸುರಕ್ಷಿತವಾಗಿ ಡಿಪೋಗೆ ತಂದೊಪ್ಪಿಸಿದರು. ಬಳಿಕ ಡಿಪೋ ಟ್ರಾಫಿಕ್ ಸೂಪರ್ಡೆಂಟ್ ಮಹೇಶ ಜೋಗಳೇಕರ್ ಹಾಗೂ ನಿರೀಕ್ಷಕ ರಘುಪತಿ ನಾಯ್ಕ ಅವರ ಸಮ್ಮುಖದಲ್ಲಿ ವಾರಸುದಾರರಾದ ಶಿಕ್ಷಕಿ ನಾಗವೇಣಿ ಗೌಡ ಅವರಿಗೆ ಚಿನ್ನದ ಗಟ್ಟಿಯನ್ನು ಹಸ್ತಾಂತರಿಸಲಾಯಿತು.