ಸುದ್ದಿ ಕನ್ನಡ ವಾರ್ತೆ

ಹಳಿಯಾಳ:ತಾಲೂಕಿನ ಬಿದೊಳ್ಳಿಯ ಮೂವರು ಆರೋಪಿಗಳಿಗೆ ಆಸ್ತಿಪಾಲು ನೀಡಲು ನಿರಾಕರಿಸಿದ ಕಾರಣಕ್ಕಾಗಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ತಲಾ 25,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ: 2019ರ ಸೆಪ್ಟೆಂಬರ್ 3ರಂದು ಹಳಿಯಾಳ ಪೊಲೀಸ್‌ ಠಾಣಾ ವ್ಯಾಪ್ತಿಯ ಬಿದೊಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಮೃತ ಕೇಶವ ಎಂಬುವವರು ತನ್ನ ಆಸ್ತಿಯಲ್ಲಿ ಪಾಲು ಕೇಳಿದಾಗ, ಪಾಲು ಕೊಡಬಾರದೆಂಬ ಉದ್ದೇಶದಿಂದಆರೋಪಿಗಳಾದ ಅಕ್ಷಯ ಅಲಿಯಾಸ್ ಆಕಾಶ ಕಿತ್ತೂರಕರ, ಪಾಂಡುರಂಗ ಕಿತ್ತೂರಕರ ಮತ್ತು ಲತಾ ಅಲಿಯಾಸ್ ತುಳಸಬಾಯಿ ಕಿತ್ತೂರಕರ ಅವರು ಪ್ಲಾಸ್ಟಿಕ್ ಹಗ್ಗದಿಂದ ಹೊಡೆದು, ನಂತರ ಕುತ್ತಿಗೆಗೆ ಹಗ್ಗ ಬಿಗಿದು ಕೇಶವ ಅವರನ್ನು ಕೊಲೆ ಮಾಡಿದ್ದರು. ಸಾಕ್ಷ್ಯನಾಶಪಡಿಸುವ ಉದ್ದೇಶದಿಂದ ಮೃತನ ರಕ್ತಸಿಕ್ತ ಬಟ್ಟೆಗಳನ್ನು ಬದಲಾಯಿಸಿ ಬೇರೆ ಬಟ್ಟೆಗಳನ್ನು ಹಾಕಲಾಗಿತ್ತು. ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯ ಅಂದಿನ ತನಿಖಾಧಿಕಾರಿ ಬಿ.ಎಸ್. ಲೋಕಾಪುರ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಕಾರವಾರ, ಪೀಠಾಸೀನ ಯಲ್ಲಾಪುರ) ನ್ಯಾಯಾಧೀಶರಾದ ಶ್ರೀ ಕಿರಣ ಕಿಣಿ ಅವರು ಪ್ರಕರಣದ ವಿಚಾರಣೆ ನಡೆಸಿದರು. ಆರೋಪಿಗಳ ವಿರುದ್ಧ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಲಾಗಿದೆ
ಅಕ್ಷಯ ಅಲಿಯಾಸ್ ಆಕಾಶ ಕಿತ್ತೂರಕರ, ಪಾಂಡುರಂಗ ಕಿತ್ತೂರ, ಲತಾ ಯಾನೆ ತುಳಸಬಾಯಿ ಕಿತ್ತೂರಕರ ಮೂವರಿಗೂ ಜೀವಾವಧಿ ಶಿಕ್ಷೆ ಹಾಗೂ ತಲಾ 25,000 ರೂ. ದಂಡ ವಿಧಿಸಲಾಗಿದೆ. ಪ್ರಕರಣದ 4 ಮತ್ತು 5ನೇ ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷಾಧಾರಗಳು ಲಭ್ಯವಾಗದ ಕಾರಣ ಅವರನ್ನು ಬಿಡುಗಡೆ ಮಾಡಲಾಗಿದೆ.ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀ ರಾಜೇಶ್ ಎಂ. ಮಳಗಿಕ‌ರ್ ಅವರು ವಾದ ಮಂಡಿಸಿದ್ದರು. ಹಳಿಯಾಳ ಪೊಲೀಸ್‌ ಠಾಣೆಯ ಕಾನ್ಸ್‌ಟೇಬಲ್ ಹನುಮಂತ ಬರ್ಗಿ ಅವರು ಸಾಕ್ಷಿದಾರರನ್ನು ಹಾಜರುಪಡಿಸುವಲ್ಲಿ ಸಹಕರಿಸಿದ್ದರು.