Banner Ad

ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನ ನಾಗೋಡಾ ಗ್ರಾಮ ಪಂಚಾಯತದ ವಾಗೇಲಿ ಗ್ರಾಮದ ಶ್ರೀ ಮಹಾದೇವ ದೇವರ ವಾರ್ಷಿಕ ಜಾತ್ರೆ ಭಕ್ತಿಭಾವ ಮತ್ತು ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ಭಕ್ತರ ಉಪಸ್ಥಿತಿಯಲ್ಲಿ ಜಾತ್ರೆಗೆ ವಿಶೇಷ ಮೆರುಗು ಕಂಡುಬಂದಿತು.

ಜಾತ್ರೆಯ ನಿಮಿತ್ತ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು, ಮಧ್ಯಾಹ್ನ 12:30ಕ್ಕೆ ಶ್ರೀ ಮಹಾದೇವ ದೇವರ ಮಹಾಪೂಜೆ ಹಾಗೂ ಶ್ರೀ ಸತ್ಯನಾರಾಯಣ ಮಹಾಪೂಜೆ ನೆರವೇರಿತು. ಭಕ್ತರು ಭಕ್ತಿಪೂರ್ವಕವಾಗಿ ಪೂಜೆಯಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದವನ್ನು ಸ್ವೀಕರಿಸಿದರು.

Banner Ad

ಮಧ್ಯಾಹ್ನ 2:00ರಿಂದ ರಾತ್ರಿ 10:00 ರವರೆಗೆ ಅನ್ನಸಂತರ್ಪಣೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ನೂರಾರು ಭಕ್ತರು ಮಹಾಪ್ರಸಾದವನ್ನು ಸ್ವೀಕರಿಸಿದರು. ರಾತ್ರಿ 10:00ಕ್ಕೆ ಶ್ರೀ ದೇವರ ಫಲಾವಳಿಗಳ ಸವಾಲ್ ಕಾರ್ಯಕ್ರಮ ನಡೆಯಿತು.

ಇದಾದ ಬಳಿಕ ರಾತ್ರಿ 12:00ಕ್ಕೆ ಭಕ್ತರ ಮನರಂಜನೆಗಾಗಿ ಶ್ರೀ ಮಹಾದೇವ ನಾಟಕ ಮಂಡಳ, ವಾಗೇಲಿ ವತಿಯಿಂದ ಸತ್ಯಾಚಾ ಶೋಧತಾ ಗುನ್ಹೇಗಾರಾ ಎಂಬ ಮೂರು ಅಂಕಗಳ ಹೃದಯಸ್ಪರ್ಶಿ ಸಾಮಾಜಿಕ ಮರಾಠಿ ನಾಟಕವನ್ನು ಪ್ರದರ್ಶಿಸಲಾಯಿತು. ಲೇಖಕ ದಶರಥ ರಾಣೆ ಅವರ ಕೃತಿಯಾದ ಈ ನಾಟಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು.

ನಾಟಕದ ಪುರುಷ ಪಾತ್ರದಲ್ಲಿ ಬಾಳಪ್ಪ ಸಾವಂತ, ಹರೀಶ ಸಾವಂತ, ಮಹೇಶ ಸಾವಂತ, ಸಂಜಯ ಸಾವಂತ, ರೋಹಿತ ಸಾವಂತ, ಅವಿನಾಶ ಸಾವಂತ, ಸಾಯಿನಾಥ ಸಾವಂತ, ಅನಿಲ ಸಾವಂತ ಹಾಗೂ ಸ್ತ್ರೀ ಪಾತ್ರದಲ್ಲಿ ಪೂಜಾ ಬಾಮಣೆ (ಕೊಲ್ಹಾಪುರ) ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದರು. ಚಂದ್ರಕಾಂತ ದೇಸಾಯಿ ಅವರು ನಿರ್ದೇಶನ ಮಾಡಿದ್ದು, ರಮೇಶ ನಾಯಕ ಹಾರ್ಮೋನಿಯಂ, ಸುನಿಲ ಪರಬ್ ತಬಲಾ, ಸುಭಾಷ ನಾಯಕ ಪ್ಯಾಡ್, ಪೂಜಾ ಸುತಾರ ಹಿನ್ನೆಲೆ ಗಾಯನ ನೀಡಿದರು.
ಕಾರ್ಯಕ್ರಮದ ವ್ಯವಸ್ಥೆಯನ್ನು ಶ್ರೀ ಮಹಾದೇವ ಟ್ರಸ್ಟ್ ಸಮಿತಿ, ವಾಗೇಲಿ ಸಮರ್ಪಕವಾಗಿ ನಿರ್ವಹಿಸಿತು. ಜಾತ್ರೆಯಲ್ಲಿ ಭಾಗವಹಿಸಿದ ಭಕ್ತರು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆನಂದಿಸಿ ಸಂತೃಪ್ತಿಯಿಂದ ಮರಳಿದರು.

Banner Ad