ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ, ಕ್ಷೇತ್ರಸಮನ್ವಯಾಧಿಕಾರಿಗಳ ಕಾರ್ಯಾಲಯ ಜೋಯಿಡಾ,
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಂದೋಳಿ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಶಿಂದೋಳಿ ಇವರ ಸಂಯುಕ್ತಾಶ್ರಯದಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಕಾರ್ಯಕ್ರಮ
ದಿನಾಂಕ : 08-04-2026ನೇ ಬುಧವಾರದಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಂದೋಳಿಯಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯ ಸಂದರ್ಭದಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಶಾಲೆಯ ಸಹ ಶಿಕ್ಷಕರಾದ ಆನಂದ ಪಿ ಯವರು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದ ರಾಮನಗರ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳು,ಹನುಮಾನಲೇನ್ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನರವರು ಮಾತನಾಡಿ ನಮ್ಮ ಕ್ಲಸ್ಟರಿನ ಶಾಲೆಯಾದ ಶಿಂದೋಳಿ ಶಾಲೆಯು ಸಮುದಾಯ, ಇಲಾಖಾಧಿಕಾರಿಗಳ,ಶಿಕ್ಷಕರ ಸಹಕಾರದಲ್ಲಿ ಸಮಗ್ರ ಶಿಕ್ಷಣ ಅಭಿಯಾನದಡಿ ತಾಲೂಕಾ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಅತ್ಯುತ್ತಮ ಎಸ್ ಡಿ ಎಂ ಸಿ ಶಾಲೆಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ.ಅದರ ಮುಂದಿನ ಭಾಗವಾಗಿ ಇಲ್ಲಿನ ಶಾಲೆಯ ಎಸ್ ಡಿ ಎಂ ಸಿ ಸಮಿತಿಯವರು ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡುವ ಉದ್ದೇಶದಿಂದ ಸ್ಮಾರ್ಟ್ ಕ್ಲಾಸ್ ನ್ನು ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ ಆಗಿದೆ,ಸಮುದಾಯದವರ ಸಹಭಾಗಿತ್ವ ಇದ್ದಲ್ಲಿ ಶೈಕ್ಷಣಿಕ ಪ್ರಗತಿ ಸುಲಭ ಎಂಬ ನಿದರ್ಶನಕ್ಕೆ ಈ ಶಾಲೆಯೇ ಅತ್ಯುತ್ತಮ ಉದಾಹರಣೆ,ಮುಂದಿನ ದಿನಗಳಲ್ಲಿ ಇದೇ ರೀತಿಯಾದ ನಿಮ್ಮೆಲ್ಲರ ಸಹಕಾರವಿರಲಿ,ನಮ್ಮೆಲ್ಲರ ಸಹಕಾರ ನಿರಂತರ ಇರಲಿದೆ ಎಂದು ಹೇಳಿದರು. ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡ ಮಾತನಾಡಿ ಎಲ್ಲರ ಸಹಕಾರದಿಂದ ಇಂದು ನಮ್ಮ ಶಾಲೆಯು ಉತ್ತಮ ಸಾಧನೆ ಮಾಡುವ ಮೂಲಕ ಈಗಾಗಲೇ ತಾಲೂಕಾ ಮಟ್ಟದ ಅತ್ಯುತ್ತಮ ಎಸ್ ಡಿ ಎಂ ಸಿ ಪ್ರಶಸ್ತಿಯನ್ನು ಪಡೆದಿದ್ದು,ಅದರ ಮುಂದುವರೆದ ಭಾಗವಾಗಿ ಸ್ಮಾರ್ಟ್ ಕ್ಲಾಸ್ ನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗುರುನಾಥ ಮಾಜಾಳಕರ, ಉಪಾಧ್ಯಕ್ಷರಾದ ತನುಜಾ ಮಸೂರಕರ,ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ,ಶುಭ ಹಾರೈಸಿದರು. ಸಹ ಶಿಕ್ಷಕಿಯಾದ ವಿದ್ಯಾ ಮೇಡಂ ವಂದನಾರ್ಪಣೆಯನ್ನು ಸಲ್ಲಿಸಿದರು.