ಸುದ್ದಿ ಕನ್ನಡ ವಾರ್ತೆ

ದಾಂಡೇಲಿ : ನಗರದ ಪ್ರತಿಭಾನ್ವಿತ ಕ್ರೀಡಾಪಟು ಹಾಗೂ ಸೆಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ದೃಷ್ಟಿ ನಕುಲ್ ಕಾಮತ್ ಈಕೆ ರಾಮನಗರ ಜಿಲ್ಲೆಯ ಕನಕಪುರದ ಟೌನ್ ಟೆನ್ನಿಸ್ ಕ್ಲಬ್ ನಲ್ಲಿ ನಡೆದ 14 ವರ್ಷ ವಯೋಮಿತಿಯ ಬಾಲಕಿಯರ ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬೆಳಗಾವಿ ವಿಭಾಗೀಯ ತಂಡವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನದೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ತಾಲೂಕಿಗೆ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾಳೆ. ರಾಷ್ಟ್ರಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ದೆಹಲಿಯಲ್ಲಿ ನವೆಂಬರ್ ತಿಂಗಳಲ್ಲಿ ನಡೆಯಲಿದೆ.

 

ಬೆಳಗಾವಿ ವಿಭಾಗಿಯ ತಂಡದ ಐವರು ಕ್ರೀಡಾಪಟುಗಳ‌ ಪೈಕಿ ಉತ್ತರ ಕನ್ನಡ ಜಿಲ್ಲೆಯಿಂದ ದಾಂಡೇಲಿಯ ದೃಷ್ಟಿ ನಕುಲ್ ಕಾಮತ್ ಹಾಗೂ ಶಿರಸಿಯ ಸೆಂಟ್ ಅಂತೋನಿ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಋತ್ವಿಕಾ ರಾಘವೇಂದ್ರ ಗೌಳಿ ಅವರು ಪ್ರತಿನಿಧಿಸಿದ್ದರು.

 

ದೃಷ್ಟಿ ನಕುಲ್ ಕಾಮತ್ ಈಕೆ ಈಗಾಗಲೇ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಸಾಕಷ್ಟು ಬಹುಮಾನವನ್ನು ಪಡೆದುಕೊಂಡಿದ್ದಾಳೆ. ಇವಳು ನಗರದ ಉದ್ಯಮಿ ನಕುಲ್ ಕಾಮತ್ ಹಾಗೂ ಶಿಕ್ಷಕಿ ಕವಿತಾ ಕಾಮತ್ ದಂಪತಿಯ ಸುಪುತ್ರಿಯಾಗಿದ್ದಾಳೆ.

 

ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುವ ದೃಷ್ಟಿ ನಕುಲ್ ಕಾಮತ್ ಈಕೆಯ ಸಾಧನೆಗೆ ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರಾದ ಬಸವರಾಜ ಪಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆ, ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಜ್ಯೋತಿಪ್ರಭಾ, ಸೆಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಕ್ಲಾರೆಟ್, ಮುಖ್ಯ ಶಿಕ್ಷಕಿ ವಿನುತಾ ಡಯಾಸ್, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸೀತಾರಾಮ ನಾಯ್ಕ ಹಾಗೂ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗ ಮತ್ತು ನಗರದ ಗಣ್ಯರನೇಕರು ಹರ್ಷವನ್ನು ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.