ಸುದ್ದಿ ಕನ್ನಡ ವಾರ್ತೆ
​​ಭಟ್ಕಳ: ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾದ ಯುದ್ಧದ ಪರಿಣಾಮ ರಾಜ್ಯಾದ್ಯಂತ ಅಡುಗೆ ಅನಿಲ ಸಿಗುವುದೇ ದೊಡ್ಡ ಸಮಸ್ಯೆಯಾಗಿರುವ, ಅದಕ್ಕಾಗಿ ಗ್ರಾಹಕರು ದಿನಗಟ್ಟಲೆ ಸಾಲಿನಲ್ಲಿ ನಿಂತು ಪರದಾಡುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ, ನವದಂಪತಿಗಳ ಭವಿಷ್ಯದ ಸಂಕಷ್ಟವನ್ನು ಅರಿತ ಸ್ನೇಹಿತರು ಸಪ್ತಪದಿ ತುಳಿದ ವಧು-ವರರಿಗೆ ನೇರವಾಗಿ ‘ಗ್ಯಾಸ್ ಸಿಲಿಂಡರ್’ ಅನ್ನೇ ಮದುವೆಯ ಉಡುಗೊರೆಯಾಗಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

​ಭಟ್ಕಳ ನಗರದಲ್ಲಿ ಇತ್ತೀಚೆಗೆ ನಡೆದ ವಿವೇಕ್ ಮಹಾಲೆ ಹಾಗೂ ನಾಗ ಸಂಧ್ಯಾ ಶಾಂತಿ ಅವರ ವಿವಾಹ ಮಹೋತ್ಸವದಲ್ಲಿ ಇಂಥದ್ದೊಂದು ವಿಶೇಷ ಹಾಗೂ ಅಪರೂಪದ ಘಟನೆ ಜರುಗಿದೆ.
​ರಾಜ್ಯಾದ್ಯಂತ ಅಡುಗೆ ಗ್ಯಾಸ್ ಅಭಾವ ತೀವ್ರವಾಗಿದ್ದು, ಮದುವೆ, ಮುಂಜೆ ಹಾಗೂ ಇನ್ನಿತರ ಶುಭಕಾರ್ಯಗಳನ್ನು ನಡೆಸುವವರು ಗ್ಯಾಸ್ ಸಿಗದೆ ಹೈರಾಣಾಗುತ್ತಿದ್ದಾರೆ.

ಗ್ಯಾಸ್ ಸಮಸ್ಯೆಯಿಂದಾಗಿ ಅನೇಕ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಹೋಟೆಲ್‌ಗಳನ್ನು ಬಂದ್ ಮಾಡಿದ್ದಾರೆ. ಸಾಮಾನ್ಯ ಜನರೂ ಗ್ಯಾಸ್ ಪಡೆಯಲು ಏಜೆನ್ಸಿಗಳ ಮುಂದೆ ಉದ್ದುದ್ದ ಸಾಲಿನಲ್ಲಿ ನಿಲ್ಲುವಂತಾಗಿದೆ. ಈ ಅಭಾವದ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಎಂಬುದು ಅತ್ಯಂತ ದುಬಾರಿ ಹಾಗೂ ‘ಅಪರೂಪದ’ ವಸ್ತುವಿನಂತಾಗಿದೆ.
​ಈ ಎಲ್ಲಾ ಸವಾಲುಗಳನ್ನು ಅರಿತ ವಿವೇಕ್ ಮಹಾಲೆ ಅವರ ಸ್ನೇಹಿತರ ಬಳಗವು, ಹೊಸ ಸಂಸಾರ ಆರಂಭಿಸುತ್ತಿರುವ ತಮ್ಮ ಗೆಳೆಯನಿಗೆ ಗ್ಯಾಸ್‌ಗಾಗಿ ಅಲೆದಾಡುವ ತಾಪತ್ರಯ ಬೇಡ ಎಂದು ನಿರ್ಧರಿಸಿ, ತುಂಬಿದ ‘ಗ್ಯಾಸ್ ಸಿಲಿಂಡರ್’ ಅನ್ನೇ ಉಡುಗೊರೆಯಾಗಿ ನೀಡಲು ತೀರ್ಮಾನಿಸಿದ್ದಾರೆ. ಅದೇ ಗ್ಯಾಸ್ ಸಿಲಿಂಡರ್ ಅನ್ನು ಬಳಸಿ, ಗೃಹ ಪ್ರವೇಶದ ವೇಳೆ ಶಾಸ್ತ್ರೋಕ್ತವಾಗಿ ‘ಹಾಲು ಉಕ್ಕಿಸುವಂತೆ’ ಸ್ನೇಹಿತರು ವಧು-ವರರಿಗೆ ಕೋರಿದ್ದಾರೆ.

​ಮದುವೆ ಮಂಟಪದಲ್ಲಿ ಸ್ನೇಹಿತರ ಬಳಗವು ವಧು-ವರರಿಗೆ ಗ್ಯಾಸ್ ಸಿಲಿಂಡರ್ ನೀಡುತ್ತಿದ್ದಂತೆ, ಅಲ್ಲಿ ನೆರೆದಿದ್ದ ಅತಿಥಿಗಳು ಹಾಗೂ ಬಂಧು-ಬಳಗದವರೆಲ್ಲರೂ ಒಮ್ಮೆ ಅಚ್ಚರಿಗೊಳಗಾದರು. ಈ ವಿಶೇಷ ಉಡುಗೊರೆಯು ಎಲ್ಲರ ಗಮನ ಸೆಳೆಯಿತು.

​ಪ್ರಸ್ತುತ ಪರಿಸ್ಥಿತಿಯಲ್ಲಿ ಗ್ಯಾಸ್ ಸಿಲಿಂಡರ್ ಅಪರೂಪದ ವಸ್ತುವಾಗಿದ್ದು, ‘ಸಮಯೋಚಿತ’ವಾಗಿ ನೆರವಾದಸ್ನೇಹಿತರ ಕಾಳಜಿಯನ್ನು ಕಾರ್ಯಕ್ರಮಕ್ಕೆ ಆಗಮಿಸಿದ್ದವರು ಶ್ಲಾಘಿಸಿದರು. ಹಲವರು ಇದನ್ನು ಹಾಸ್ಯದ ರೂಪದಲ್ಲಿಯೂ ಸ್ವೀಕರಿಸಿ ನಗು ಬೀರಿದರೆ, ಇನ್ನೂ ಕೆಲವರು ರಾಜ್ಯದಲ್ಲಿ ನಿರ್ಮಾಣವಾಗಿರುವ ಗ್ಯಾಸ್ ಅಭಾವದ ಪರಿಸ್ಥಿತಿಯ ಬಗ್ಗೆ ಮರುಕ ಹಾಗೂ ಅಸಮಾಧಾನ ವ್ಯಕ್ತಪಡಿಸಿದರು. ಒಟ್ಟಿನಲ್ಲಿ, ಈ ‘ಸಿಲಿಂಡರ್ ಗಿಫ್ಟ್’ ಮದುವೆ ಮಂಟಪದಲ್ಲಿ ಹೊಸ ಸಂಚಲನ ಮೂಡಿಸಿದ್ದು ಮಾತ್ರ ಸುಳ್ಳಲ್ಲ.