ಸುದ್ದಿ ಕನ್ನಡ ವಾರ್ತೆ
ಲೋಂಡಾ: ಬೆಂಗಳೂರಿನಿಂದ ಗೋವಾಕ್ಕೆ ಪ್ರೈವುಡ್ ತುಂಬಿಕೊಂಡು ಸಾಗುತ್ತಿದ್ದ 16 ಚಕ್ರದ ಬೃಹತ್ ಟ್ರಕ್ ಒಂದರ ಟೈರ್ ಏಕಾಏಕಿ ಸ್ಪೋಟಗೊಂಡು, ವಾಹನ ಸಂಪೂರ್ಣವಾಗಿ ಬೆಂಕಿಗಾಹುತಿಯಾದ ಭೀಕರ ಘಟನೆ ರಾಮನಗರ-ಧಾರವಾಡ ರಸ್ತೆಯಲ್ಲಿ ಭಾನುವಾರ ಸಂಜೆ ವರದಿಯಾಗಿದೆ.

ರಾಮನಗರ-ಧಾರವಾಡ ಮಾರ್ಗದ ನಾಗರಗಾಳಿ ಹಾಗೂ ತಾವರಕಟ್ಟೆ ನಡುವಿನ ಪ್ರದೇಶದಲ್ಲಿ ಭಾನುವಾರಸಂಜೆ 6 ಗಂಟೆಯ ಸುಮಾರಿಗೆ ಈ ಅವಘಡ ಸಂಭವಿಸಿದೆ. ಟ್ರಕ್‌ನಲ್ಲಿ ಪ್ರೈವುಡ್‌ನಂತಹ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳಿದ್ದ ಕಾರಣ, ಟೈರ್ ಸ್ಫೋಟಗೊಂಡು ಕಾಣಿಸಿಕೊಂಡ ಸಣ್ಣ ಕಿಡಿಯು ಕ್ಷಣಾರ್ಧದಲ್ಲೇ ಇಡೀ ಟ್ರಕ್ ಅನ್ನು ಆವರಿಸಿಕೊಂಡಿದೆ. ನೋಡನೋಡುತ್ತಿದ್ದಂತೆಯೇ ಬೃಹತ್ ವಾಹನವು ದಗದಗನೆ ಹೊತ್ತಿ ಉರಿದು ಸಂಪೂರ್ಣವಾಗಿ ಭಸ್ಮವಾಗಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಟ್ರಕ್‌ನಿಂದ ಹೊಮ್ಮುತ್ತಿದ್ದ ಬೃಹತ್ ಬೆಂಕಿಯ ಕೆನ್ನಾಲಿಗೆಯು ರಸ್ತೆಯ ಪಕ್ಕದಲ್ಲಿದ್ದ ದಟ್ಟ ಕಾಡಿನತ್ತಲೂ ವ್ಯಾಪಿಸುತ್ತಿದ್ದರಿಂದ ಕೆಲಕಾಲ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಹಳಿಯಾಳ ಹಾಗೂ ಖಾನಾಪುರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು.
ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ, ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತರುವ ಮೂಲಕ ಕಾಡಿಗೆ ಬೆಂಕಿ ಹರಡುವುದನ್ನು ಯಶಸ್ವಿಯಾಗಿ ತಡೆದರು. ಆದರೆ, ಅಗ್ನಿಶಾಮಕ ದಳ ಬರುವಷ್ಟರಲ್ಲಿ ಟ್ರಕ್ ಹಾಗೂ ಅದರಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಪ್ರೈವುಡ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು.

ಈ ಭೀಕರ ಅಗ್ನಿ ಅವಘಡದ ಕುರಿತು ಲೊಂಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಸಂಚಾರ ಅಸ್ತವ್ಯಸ್ತಗೊಂಡಿದ್ದ ಹೆದ್ದಾರಿಯನ್ನು ಪೊಲೀಸರು ಸುಗಮಗೊಳಿಸಿದರು.