ಸುದ್ದಿ ಕನ್ನಡ ವಾರ್ತೆ
Goa:ನವರಾತ್ರಿಯು ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಮಹತ್ವ ಪಡೆದುಕೊಂಡ ಹಬ್ಬವಾಗಿದೆ. ಗೋವಾ ರಾಜ್ಯದಲ್ಲಿ ನವರಾತ್ರಿ ಉತ್ಸವವನ್ನು ಶ್ರದ್ಧಾ ಭಕ್ತಿಯಿಂದ ಹಾಗೂ ವಿವಿಧ ಧಾರ್ಮಿಕ ಆಚರಣೆಗಳ ಮೂಲಕ ನೆರವೇರಿಸಲಾಗುತ್ತದೆ.
ಗೋವಾದಲ್ಲಿ ನವರಾತ್ರಿ ಎಂದ ತಕ್ಷಣ ಮೊದಲು ನೆನಪಿಗೆ ಬರುವುದು ಮಕರ ಉತ್ಸವ. ಗೋವಾದ ವಿವಿಧ ದೇವಾಲಯಗಳಲ್ಲಿ ಮಕರೋತ್ಸವ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ದೇವಸ್ಥಾನಗಳಲ್ಲಿ ದೇವಿಯನ್ನು ಉಯ್ಯಾಲೆ ಅಂತಹ ಮಂಟಪದಲ್ಲಿ ಪ್ರತಿಷ್ಠಾಪಿಸಿ ಅಲಂಕರಿಸಿ ಉಯ್ಯಾಲೆಯಂತೆ ತೂಗುತ್ತಾ ಆರತಿ ಮಾಡುವ ಪದ್ಧತಿ ಇದೆ. ದೇವರಿಗೆ ನಡೆಸುವ ಈ ವಿಶಿಷ್ಟ ಸೇವೆ ಮಕರೋತ್ಸವ ವೀಕ್ಷಣೆಗೆ ಪ್ರತಿ ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ.
ಗೋವಾದ ಮಂಗೇಶಿ, ಮಹಾಲಸ ದೇವಸ್ಥಾನ, ಸೇರಿದಂತೆ ಹಲವು ಪ್ರಮುಖ ದೇವಾಲಯಗಳಲ್ಲಿ ಅನೇಕ ವರ್ಷಗಳಿಂದ ಮಕರೋತ್ಸವ ಆಚರಣೆ ಇದೆ.
ಮಕರೋತ್ಸವವನ್ನು ನವರಾತ್ರಿಯಲ್ಲಿ ದಸರಾ ವರೆಗೆ ನೆರವೇರಿಸಲಾಗುತ್ತದೆ. ಪ್ರತಿದಿನ ವಿಶೇಷ ಪೂಜೆ ನೆರವೇರಿಸಿ ರಾತ್ರಿ ದೇವಿ ಸ್ಥಾಪನೆಯಾಗಿರುವ ಮಕರವನ್ನು ಉಯ್ಯಾಲೆಯಂತೆ ತೂಗುತ್ತಾ ಆರತಿ ಸೇವೆ ಸಲ್ಲಿಸಲಾಗುತ್ತದೆ. ಈ ಸೇವೆಯ ದರ್ಶನ ಭಾಗ್ಯ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ನವರಾತ್ರಿಯಲ್ಲಿ ಈ ಮಕರದಲ್ಲಿ ಪ್ರತಿಷ್ಠಾಪನೆಯಾಗಿರುವ ದುರ್ಗೆಯು ಪ್ರತಿದಿನ ವಿವಿಧ ಅವತಾರಗಳಲ್ಲಿ ದರ್ಶನ ನೀಡುವುದು ವಿಶೇಷವಾಗಿದೆ.
ಗೋವಾದಲ್ಲಿ ನವರಾತ್ರಿಯಲ್ಲಿ ಮಕರೋತ್ಸವ ಸೇವೆಯು ಹೆಚ್ಚು ಮಹತ್ವ ಪಡೆದುಕೊಂಡಿದೆ.
