ಸುದ್ದಿ ಕನ್ನಡ ವಾರ್ತೆ
ಶಿರಸಿ :ತಾಲೂಕಿನ ರಾಜ್ಯ ಪ್ರಸಿದ್ಧ ಚೈತ್ರ ಶುದ್ಧ ಹುಣ್ಣಿಮೆಯಂದು ನೇರವೇರುವ ಶ್ರೀಕ್ಷೇತ್ರ ಮಂಜುಗುಣಿಯ ಶ್ರೀ ವೆಂಕಟರಮಣ ದೇವರ ಮಹಾರಥೋತ್ಸವ ಭಕ್ತಿ ಸಂಭ್ರಮದಿಂದ ನಡೆಯಿತು.
ಗುರುವಾರ ಬೆಳಿಗ್ಗೆ ಸಾವಿರಾರು ಭಕ್ತರು ಸೇರಿಕೊಂಡು ಮಂಜುಗುಣಿ ದೇವರನ್ನು ಹೊತ್ತತೇರನ್ನು ಎಳೆಯುವ ಮೂಲಕ ರಥೋತ್ಸವ ಸಂಪನ್ನಗೊಂಡಿತು.
ಬಳಿಕ ರಾತ್ರಿಯವರೆಗೂ ಹಣ್ಣು ಕಾಯಿ ಸೇವೆಗೆ ಅವಕಾಶ ಮಾಡಿಕೊಡಲಾಯಿತು.50 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು.
ಇನ್ನು ಮಂಜುಗುಣಿಯ ರಥೋತ್ಸವದಲ್ಲಿ ಹಲವಾರು ಸಾಂಪ್ರದಾಯಿಕ ಆಚರಣೆಗಳು, ಹರಕೆಗಳ ಮಧ್ಯೆ ಶಿಶು ಪೂಜೆ ವಿಶಿಷ್ಟ ಆಚರಣೆಯಾಗಿದೆ.
ಮಹಾರಥೋತ್ಸವದ ಸಂದರ್ಭದಲ್ಲಿ ಶ್ರೀಕ್ಷೇತ್ರ ಮಂಜುಗುಣಿಯ ಶ್ರೀ ವೆಂಕಟರಮಣ ದೇವರಿಗೆ ಹರಕೆ ಹೊತ್ತು ಮಕ್ಕಳನ್ನು ಪಡೆದ ದಂಪತಿಗಳು ತಮ್ಮ ಮಗುವಿನೊಡನೆ ಬಂದು, ರಥದ ಎದುರು ಅಕ್ಕಿ, ಕಾಯಿ, ಎಲೆ ಅಡಿಕೆಯ ವೀಳ್ಯದೆಲೆಯೊಡನೆ ಸಾಂಪ್ರದಾಯಿಕ ಪಡಿಯ ಮೇಲೆ ಮಗುವನ್ನು ಮಲಗಿಸಿ, ಅಕ್ಷತೆ ಹಾಕಿ ಪೂಜಿಸುವ ಮೂಲಕ ಹರಕೆ ತೀರಿಸಿದರು.
ಮುದ್ದು ಕಂದಮ್ಮಗಳ ಅಬೋಧ ಮುಖ ಮುದ್ರೆ, ಹಾವಭಾವಗಳು ಒಂದೆಡೆಯಾದರೆ, ಇನ್ನೊಂದೆಡೆ ಹೆತ್ತವರಲ್ಲಿ ಸಂತಾನಪ್ರಾಪ್ತಿಯ ಸಂತಸ ಹಾಗೂ ಶ್ರೀದೇವರ ಕೃಪೆ ಹೊಂದಿರುವ, ಹರಕೆಯ ಫಲ ಪಡೆದು ಧನ್ಯರಾದ ಭಾವ ಹರ್ಷ, ಸಂಭ್ರಮಕ್ಕೆ ದಾರಿ ಮಾಡಿತು.
ಶ್ರೀಕ್ಷೇತ್ರ ಮಂಜುಗುಣಿಯ ಶ್ರೀ ವೆಂಕಟರಮಣ ದೇವರಿಗೆ ಸಂತಾನಪ್ರಾಪ್ತಿ ಹರಕೆ ಸಹಿತ ಅನಾರೋಗ್ಯ ಅದರಲ್ಲೂ ಮೈಮೇಲೆ ಏಳುವ ಬೆವರುಕುರು ಇತ್ಯಾದಿಗಳ ನಿವಾರಣೆಯ ಹರಕೆ, ಅವಿವಾಹಿತ ಹೆಣ್ಣು ಮತ್ತು ಗಂಡು ಮಕ್ಕಳ ವಿವಾಹಾರ್ಥವಾಗಿ ಹಾಗೂ ಇನ್ನಿತರ ವಿವಿಧ ಕಾರಣಗಳಿಗೆ, ಕಾರ್ಯಗಳಿಗಾಗಿ ಸಹ ಹರಕೆ ಹೊರಲಾಗುತ್ತದೆ.
ಹರಕೆ ಫಲಿಸಿದ ನಂತರ ರಥೋತ್ಸವದಲ್ಲಿ ರಥಾರೂಢ ಸ್ವಾಮಿಯ ದರ್ಶನ ಪಡೆದು ಹರಕೆ ತೀರಿಸುವುದು ವಿಶೇಷತೆ.ರಥಗಾಣಿಕೆಯಾಗಿ ವಿವಿಧ ಫಲಾವಳಿಗಳು,ಹಣ್ಣು, ಹೂವಿನ ಹಾರ ಇತ್ಯಾದಿಗಳ ಹರಕೆಯನ್ನು ತಮ್ಮ ಕಷ್ಟ, ಅನಾರೋಗ್ಯ, ವಿವಿಧ ಸಂದರ್ಭಗಳಲ್ಲಿ ಹೊತ್ತ ಹರಕೆಗನುಗುಣವಾಗಿ ಸಮರ್ಪಿಸಿದರು.ಅಲ್ಲದೇ ರಥಕ್ಕೆ ಬಾಳೆ ಹಣ್ಣು, ನೆನೆಸಿದ ಹಸಿ ಕಡಲೆ ತೂರುವ ಹರಕೆಯನ್ನು ಸಹ ಅತ್ಯುತ್ಸಾಹದಿಂದ ನೆರೆದ ಭಕ್ತರು ನೆರವೇರಿಸಿದರು.
