ಸುದ್ದಿ ಕನ್ನಡ ವಾರ್ತೆ
ಬೆಂಗಳೂರು: ಹಿಂದೂಗಳ ಪವಿತ್ರ ಹಬ್ಬ ಹಾಗೂ ಭಾರತೀಯರ ಹೊಸ ವರ್ಷವಾದ ಯುಗಾದಿ ಸಂದರ್ಭದಲ್ಲಿ ಊರಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಯು ಬೆಂಗಳೂರಿನಿಂದ ಕರಾವಳಿ ಭಾಗಕ್ಕೆ ವಿಶೇಷ ರೈಲು ಸೇವೆಯನ್ನು ಘೋಷಿಸಿದೆ.
ಹಬ್ಬದ ರಜೆಯ ಕಾರಣದಿಂದ ಬೆಂಗಳೂರಿನಿಂದ ಮಂಗಳೂರು, ಉಡುಪಿ ಹಾಗೂ ಕಾರವಾರದತ್ತ ಮುಖ ಮಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಈ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಜನಸಾಮಾನ್ಯರಿಗೆ ಸುಲಭ ಪ್ರಯಾಣ ಕಲ್ಪಿಸಲು ರೈಲ್ವೆ ಇಲಾಖೆ ಈ ಕ್ರಮ ಕೈಗೊಂಡಿದೆ.

ವಿಶೇಷ ರೈಲಿನ ವಿವರಗಳು:
ಈ ರೈಲು (06267/06268) ಬೆಂಗಳೂರಿನ ಯಶವಂತಪುರದಿಂದ ಹೊರಟು ಮಂಗಳೂರು, ಉಡುಪಿ ಮಾರ್ಗವಾಗಿ ಗೋವಾದ ಮಡಗಾಂವ್ ತಲುಪಲಿದೆ.
* ರೈಲು ಸಂಖ್ಯೆ 06267 (ಯಶವಂತಪುರ-ಮಡಗಾಂವ್) ಮಾರ್ಚ್ 18, 2026 (ಬುಧವಾರ) ರಂದು ಯಶವಂತಪುರದಿಂದ ಪ್ರಯಾಣ ಆರಂಭಿಸಲಿದೆ.

* ರೈಲು ಸಂಖ್ಯೆ 06268 (ಮಡಗಾಂವ್ – ಬೆಂಗಳೂರುಕ್ಯಾಂಟ್): ಮಾರ್ಚ್ 19, 2026 (ಗುರುವಾರ) ರಂದು ಮಡಗಾಂವ್‌ನಿಂದ ವಾಪಸ್ ಹೊರಟು ಬೆಂಗಳೂರು ಕ್ಯಾಂಟೋನ್ಮಂಟ್ ತಲುಪಲಿದೆ. ಪ್ರಮುಖ ನಿಲುಗಡೆಗಳು:ಈ ವಿಶೇಷ ರೈಲು ಮಂಗಳೂರು ಸೆಂಟ್ರಲ್/ಜಂಕ್ಷನ್, ಸುರತ್ಕಲ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ (ಬೈಂದೂರು), ಭಟ್ಕಳ,ಮುರುಡೇಶ್ವರ, ಕುಮಟಾ, ಗೋಕರ್ಣ, ಅಂಕೋಲಾ ಮತ್ತು ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಕೋಚ್‌ಗಳ ಮಾಹಿತಿ:
ಈ ರೈಲು ಒಟ್ಟು 24 ಬೋಗಿಗಳನ್ನು ಹೊಂದಿದ್ದು, ಇದರಲ್ಲಿ ಸ್ವೀಪರ್ ಕ್ಲಾಸ್ ಜನರಲ್ ಬೋಗಿಗಳು ಮತ್ತು ಲಗೇಜ್ ವ್ಯಾನ್‌ಗಳು ಒಳಗೊಂಡಿವೆ.
ಜನರ ಬೇಡಿಕೆಗೆ ತಕ್ಷಣ ಸ್ಪಂದಿಸಿ ವಿಶೇಷ ರೈಲು ಮಂಜೂರು ಮಾಡಿದ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್, ವಿ. ಸೋಮಣ್ಣ ಹಾಗೂ ನೈರುತ್ಯ ರೈಲ್ವೆ ಇಲಾಖೆಗೆ ಧನ್ಯವಾದಗಳು ಎಂದು ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ.
ಗಮನಿಸಿ: ಪ್ರಯಾಣಿಕರು IRCTC ವೆಬ್‌ಸೈಟ್ ಅಥವಾ ರೈಲ್ವೆ ನಿಲ್ದಾಣದ ಕೌಂಟರ್‌ಗಳ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಲು ಕೋರಲಾಗಿದೆ.