ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ನಂದಿಗದ್ದೆ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ಭಾರತೀಯ ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರ ಭಾವಚಿತ್ರಕ್ಕೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಂಗಲಾ ಉಪಾಧ್ಯ,ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಜನಾರ್ದನ ಹೆಗಡೆ ಸರ್,ಸಹ ಶಿಕ್ಷಕ ವೃಂದದವರು,ಪಾಲಕ ವೃಂದದವರು,ವಿದ್ಯಾರ್ಥಿಗಳು ಪುಷ್ಪ ನಮನ ಸಲ್ಲಿಸುವ ಮೂಲಕ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಜನಾರ್ದನ ಹೆಗಡೆಯವರು ಭಾರತದಲ್ಲಿ ಪ್ರತಿ ವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತದೆ. 1928 ರಲ್ಲಿ ಸರ್ ಸಿ.ವಿ.ರಾಮನ್ ಅವರು ‘ರಾಮನ್ ಪರಿಣಾಮ’ (Raman Effect) ಆವಿಷ್ಕರಿಸಿದ ದಿನವಿದು, ಇದಕ್ಕಾಗಿ ಅವರಿಗೆ ನೊಬೆಲ್ ಪ್ರಶಸ್ತಿ ಲಭಿಸಿತು. ವಿಜ್ಞಾನದ ಮಹತ್ವ, ವೈಜ್ಞಾನಿಕ ಮನೋಭಾವನೆ ಮತ್ತು ದೈನಂದಿನ ಜೀವನದಲ್ಲಿ ವಿಜ್ಞಾನದ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಭುವನೇಶ್ವರ ಮೇಸ್ತಾರವರು ಮಾತನಾಡಿ ವಿಜ್ಞಾನವು ಮಾನವನ ಜೀವನವನ್ನು ಸರಳಗೊಳಿಸಿದ ಮತ್ತು ಸುಧಾರಿಸಿದ ಪ್ರಮುಖ ಸಾಧನವಾಗಿದೆ. ಭಾರತದಲ್ಲಿ ವಿಜ್ಞಾನದ ಕ್ಷೇತ್ರದಲ್ಲಿನ ಸಾಧನೆಗಳನ್ನು ಗುರುತಿಸಲು ಮತ್ತು ಯುವ ಪೀಳಿಗೆಯಲ್ಲಿ ವೈಜ್ಞಾನಿಕ ಚಿಂತನೆಯನ್ನು ಪ್ರೋತ್ಸಾಹಿಸಲು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ನಂದಿಗದ್ದೆ ಶಾಲೆಯ ಸಹ್ಯಾದ್ರಿ ಇಕೋ ಕ್ಲಬ್ ವತಿಯಿಂದ ವಿಜ್ಞಾನ ಮತ್ತು ಗಣಿತ ಮೇಳದಲ್ಲಿ ಕಿರಿಯರ ವಿಭಾಗದ ಹಾಗೂ ಹಿರಿಯರ ವಿಭಾಗದ ಪ್ರತ್ಯೇಕ ಮಾದರಿಗಳ ಪ್ರದರ್ಶನ ನಡೆಯಿತು.ರಾಕೇಟ್ ಉಡಾವಣಾ ಮಾದರಿ,ಪೊಲ್ಡಿಂಗ್ ಬ್ರಿಡ್ಜ್ ಮಾದರಿ,ಮಳೆ ನೀರಿನ ಕೊಯ್ಲು ಮಾದರಿ,ವಾಟರ್ ಫಿಲ್ಟರ್ ಮಾದರಿ,ಚಿಲ್ಲಿ ಕಟರ್,ಗನ್ ಮಾದರಿ,ವಾಟರ್ ಹ್ಯಾಂಡ್ ಪಂಪ್ ಮಾದರಿ,ನ್ಯೂಟನ್ ವರ್ಣ ಚಕ್ರ,ಗಾಳಿಯ ಒತ್ತಡ ಮಾದರಿ,ಲಿಟ್ಮಸ್ ಪೇಪರ್ ತಯಾರಿಕೆ,ಸೂಚಕಗಳ ತಯಾರಿಕೆ,ಮಾಯವಾಗುವ ಅಕ್ಷರ,ವಸ್ತು ಉರಿಯಲು ಆಮ್ಲಜನಕ ಅಗತ್ಯ ಮಾದರಿ,ಜ್ವಾಲಾಮುಖಿ ಮಾದರಿ,ಸ್ಟೇತ್ ಸ್ಕೋಪ್ ಮಾದರಿ ಸ್ಪರ್ಧೆ ಹಾಗೇ,ಗಣಿತದ ಮಾದರಿ ತಯಾರಿಕೆ ಮಾಡಲಾಗಿತ್ತು. ವಿಜ್ಞಾನ ಪ್ರಯೋಗ ಉಪಕರಣಗಳ ಪ್ರದರ್ಶನ ಹಾಗೂ ವಿವರಣೆಯನ್ನು ಪುಟಾಣಿ ಮಕ್ಕಳು ನೀಡಿದರು.
ಹೀಗೆ ಭೌತ ಶಾಸ್ತ್ರ,ಜೀವ ಶಾಸ್ತ್ರ ಹಾಗೂ ರಾಸಾಯನಿಕ ಶಾಸ್ತ್ರದ ಪ್ರಯೋಗಗಳನ್ನು ಕೈಗೊಳ್ಳಲಾಯಿತು. ವಿಜ್ಞಾನ ಹಾಗೂ ಗಣಿತ ಮಾದರಿಯ ಪ್ರದರ್ಶನದ ಪ್ರಥಮ,ದ್ವಿತೀಯ,ತೃತೀಯ ಬಹುಮಾನದ ಆಯ್ಕೆಯ ನಿರ್ಣಯವನ್ನು ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಜನಾರ್ದನ ಹೆಗಡೆ ಸರ್, ಗುಂದ ಪ್ರೌಢಶಾಲೆಯ ಶಿಕ್ಷಕರಾದ ಬಸವರಾಜ ಸರ್,ರಿಯಾ ಮೇಡಂ ಅವರು ನೀಡಿದರು. ಶಾಲೆಯ ಸಹ ಶಿಕ್ಷಕಿಯರಾದ ಶೋಭಾ ಮೇಡಂ,ಸುವರ್ಣಾ ವಡಮಾಂವ, ಬೆಲ್ವಿಟಾ ಆರ್ ,ಎಲ್ವಿಸ್ ಕುಲಾಸ, ಮಕ್ಕಳಿಗೆ ಮಾರ್ಗದರ್ಶನ, ಸಹಕಾರ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪಾಲಕರು,ಪೋಷಕರು,ನಂದಿಗದ್ದೆ ಗ್ರಾಮ ಪಂಚಾಯತದ ನಿಕಟ ಪೂರ್ವ (ಮಾಜಿ)ಸದಸ್ಯರಾದ ಧವಳೋ ಗಣೇಶ ಸಾವರ್ಕರ್ ಮಕ್ಕಳ ಮಾದರಿ,ಅವರ ವಿವರಣೆಯನ್ನು ಕೇಳಿ ಮಕ್ಕಳ ಚಟುವಟಿಕೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಗುಂದ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಗಮಿಸಿ ವಿದ್ಯಾರ್ಥಿಗಳ ಮಾದರಿಗಳನ್ನು ವೀಕ್ಷಿಸಿದರು.
