ಸುದ್ದಿ ಕನ್ನಡ ವಾರ್ತೆ
ಅಂಕೋಲಾ: ಪಟ್ಟಣದ ಪುರಲಕ್ಕಿಬೇಣದಲ್ಲಿ ನಡೆದ ಭಜನಾ ಸಪ್ತಾಹ ಕಾರ್ಯಕ್ರಮದಲ್ಲಿ ಈ ಬಾರಿ ಭಕ್ತಿಭಾವದ ಜೊತೆಗೆ ಕಲಾತ್ಮಕತೆಯ ಮೆರುಗು ಕೂಡ ಕಂಡು ಬಂದಿತು. ಭಜನೆಯ ನಾದದ ನಡುವೆ ರಂಗೋಲಿ ಕಲೆಯ ಅದ್ಭುತ ರೂಪಕ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಉತ್ತರಕನ್ನಡ ಜಿಲ್ಲಾಧಿಕಾರಿಯಾದ ಲಕ್ಷ್ಮೀ ಪ್ರಿಯ ಅವರ ಭಾವಚಿತ್ರವನ್ನು ರಂಗೋಲಿಯಾಗಿ ಮೂಡಿಸಲಾಯಿತು. ಡಿಸಿ ಅವರ ಜನಪರ ಸೇವೆಯನ್ನು ಮೆಚ್ಚಿದ ನಿಶಾಂತ ಆಗೇರ ಅವರು ತಮ್ಮ ಮನೆಯ ಮುಂಭಾಗದಲ್ಲಿ ಡಿಸಿ ಅವರ ರಂಗೋಲಿಯನ್ನು ಸಾದರಪಡಿಸಿದ್ದರು. ಸೂಕ್ಷ್ಮ ರೇಖಾಚಿತ್ರಗಳ ಮೂಲಕ ಜೀವಂತಿಕೆಯ ಸ್ಪರ್ಶ ನೀಡಿದ ಮಯೂರ ಆಗೇರ ಅವರ ಕಲಾತ್ಮಕತೆ ಮತ್ತಷ್ಟು ಕಳೆ ತುಂಬಿತು. ಬಣ್ಣಗಳ ಸಮ್ಮಿಲನ, ಅಚ್ಚುಕಟ್ಟಾದ ಆಕಾರ ಹಾಗೂ ಅಭಿಮಾನಭಾವದಿಂದ ಮೂಡಿದ ಈ ರಂಗೋಲಿ ಭಜನಾ ಸಪ್ತಾಹದ ಪ್ರಮುಖ ಆಕರ್ಷಣೆಯಾಗಿ ತಲೆ ಎತ್ತಿತು. ಸ್ಥಳೀಯರು ಮಾತ್ರವಲ್ಲದೆ ಆಗಮಿಸಿದ ಭಕ್ತರು ಮತ್ತು ಗಣ್ಯರು ಕೂಡ ಚಿತ್ರಕಲೆಯ ಈ ವಿಶಿಷ್ಟ ಅಭಿವ್ಯಕ್ತಿಯನ್ನು ಕೊಂಡಾಡಿದ್ದು ಕಂಡು
ಬಂದಿತು.
