ಸುದ್ದಿ ಕನ್ನಡ ವಾರ್ತೆ
ಕಾರವಾರ: ತಾಲೂಕಿನ ಸಂತೋಷಿ ಮಾತಾ ದೇವಸ್ಥಾನದ ಸಮೀಪ ಹರಿಯುವ ಕಾಳಿ ನದಿ ತೀರದಲ್ಲಿ ಸುಮಾರು 100 ಕೆಜಿಗೂ ಅಧಿಕ ತೂಕದ ಬೃಹತ್ ಗಾತ್ರದ ಆಮೆಯನ್ನು ಅರಣ್ಯ ಇಲಾಖೆ , ಸಿಬ್ಬಂದಿಗಳು ಯಶಸ್ವಿಯಾಗಿ ರಕ್ಷಿಸಿದ್ದಾರೆ. ನದಿ ತೀರದಲ್ಲಿ ಅಲೆದಾಡುತ್ತಿದ್ದ ಈ ಬೃಹತ್ ಆಮೆಯನ್ನು ಗಮನಿಸಿದ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ. ಸುಮಾರು 60 ವರ್ಷ ವಯಸ್ಸಿನ ಈ ಆಮೆಯು ತೀವ್ರ ನಿತ್ರಾಣಗೊಂಡ ಸ್ಥಿತಿಯಲ್ಲಿ ಕಂಡುಬಂದಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಕಾರವಾರದ ಮರೈನ್ ಅರಣ್ಯ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಆಮೆಯನ್ನು ಸುರಕ್ಷಿತವಾಗಿ ದಡಕ್ಕೆ ತಂದಿದ್ದಾರೆ.

ಅಪರೂಪದ ‘ಗ್ರೀನ್ ಸೀ ಟರ್ಟಲ್’

ರಕ್ಷಣೆಗೊಳಗಾದ ಈ ಆಮೆಯು ಅತ್ಯಂತ ಅಪರೂಪದ ಹಾಗೂ ಸಂರಕ್ಷಿತ ಪ್ರಭೇದವಾದ ‘ಗ್ರೀನ್ ಟರ್ಟಲ್’ ಎಂದು ಗುರುತಿಸಲಾಗಿದೆ. ನಿತ್ರಾಣಗೊಂಡಿದ್ದ ಈ ಜೀವಿಗೆ ಪಶುವೈದ್ಯರು ತಕ್ಷಣದ ಚಿಕಿತ್ಸೆ ನೀಡಿದ್ದು, ಪ್ರಸ್ತುತ ಅರಣ್ಯ ಇಲಾಖೆಯ ನಿಗಾದಲ್ಲಿದೆ. ಆಮೆ ಈಗ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಅದು ಸಂಪೂರ್ಣವಾಗಿ 7 ಚೇತರಿಸಿಕೊಂಡ ನಂತರ, ಅದನ್ನು ಸುರಕ್ಷಿತವಾಗಿ ಸಮುದ್ರದಳ ಆಳಕ್ಕೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಇಲಾಖೆಯ ಈ ತ್ವರಿತ ಕಾರ್ಯಾಚರಣೆಗೆ ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.