ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಪಟ್ಟಣದ ದೇವಿ ಮೈದಾನದಲ್ಲಿ ಗ್ರಾಮದೇವಿ ಜಾತ್ರೆಯ ಮೂರನೇಯ ದಿವಸವಾದ ಶುಕ್ರವಾರ ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸಿ ದೇವಿಯರಿಗೆ ಹಣ್ಣು ಕಾಯಿ, ಉಡಿ ಸೇವೆ ಸಲ್ಲಿಸಿದರು.
ಶುಕ್ರವಾರ ದೇವಿಯ ವಾರವಾಗಿರುವುದರಿಂದ ಬೆಳಗ್ಗೆ 6 ಗಂಟೆಯಿಂದಲೇ ದೊಡ್ಡ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದು ಸರತಿ ಸಾಲಿನಲ್ಲಿ ನಿಂತು ದೇವಿಯರ ದರ್ಶನ ಪಡೆಯುತ್ತಿರುವುದು ಕಂಡು ಬಂತು. ಬಿಸಿಲನ್ನು ಲೆಕ್ಕಿಸದೇ ಮಂಟಪದ ಹೊರಗೇ, ಜಾತ್ರೆಯ ಪೇಟೆಯವರೆಗೆ ಉದ್ದನೆಯ ಸಾಲು ನೆರೆದಿತ್ತು. ಸಾಲು ಉದ್ದವಾಗಿದ್ದರೂ ಸಮರ್ಪಕವಾದ ವ್ಯವಸ್ಥೆ ಕಲ್ಪಿಸಿರುವ ಕಾರಣ ಯಾವುದೇ ಗೊಂದಲಗಳಿಲ್ಲದೇ ದರ್ಶನ, ಸೇವೆಗೆ ಅವಕಾಶವಾಗಿದೆ.
ದೇವಿಯ ದರ್ಶನಕ್ಕೆ ಜಿಲ್ಲೆ ಹಾಗೂ ತಾಲೂಕಿನ ನಾನಾ ಭಾಗಗಳಿಂದ ಭಕ್ತ ಸಮೂಹ ಹರಿದು ಬರುತ್ತಿದ್ದು, ಜಾತ್ರೆಯ ಸಂಭ್ರಮ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದೆ.
ದೇವಿಯ ದರ್ಶನ ಮಾಡಿ, ಪ್ರಸಾದ ಸ್ವೀಕರಿಸಿದ ಭಕ್ತರು, ದೇವಾಲಯದ ಮಾದರಿಯಾಗ ಜಾತ್ರಾ ಮಂಟಪದಲ್ಲಿ ಭಾವಚಿತ್ರ ತೆಗೆಸಿಕೊಳ್ಳುವುದರಲ್ಲಿ ಬ್ಯುಸಿಯಾಗಿರುವುದು ಕಂಡು ಬಂತು.ಜಾತ್ರಾಪೇಟೆಯಲ್ಲಿಯೂ ಶುಕ್ರವಾರ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ಅಮ್ಯೂಸ್ ಮೆಂಟ್ ಪಾರ್ಕ್ ಪ್ರದೇಶದಲ್ಲಿ ಹಾಗೂ ವಿವಿಧ ಅಂಗಡಿ ಮುಂಗಟ್ಟುಗಳಲ್ಲಿ ಜನಜಂಗುಳಿ ಕಂಡುಬಂದಿದೆ. ಅಂಗಡಿಗಳಲ್ಲಿ ವ್ಯಾಪಾರ ವ್ಯವಹಾರವೂ ಜೋರಾಗಿಯೇ ನಡೆದಿದೆ.
ಗ್ರಾಮದೇವಿ ಜಾತ್ರೆಯ ನಿಮಿತ್ತ ಕಾನೂನು ಸುವ್ಯವಸ್ಥೆ ಮತ್ತು ಭದ್ರತೆ ಒದಗಿಸಲು ವಿವಿದೆಡೆಯಿಂದ ಆಗಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪಟ್ಟಣದ ಮುಂಡಗೋಡ ರಸ್ತೆಯಲ್ಲಿರುವ ಈಶ್ವರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಊಟ,ಉಪಹಾರ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.400ಕ್ಕೂ ಹೆಚ್ಚು ಪೊಲೀಸರಿಗೆ ಇಲ್ಲಿ ವಸತಿ, ಶುಚಿರುಚಿಯಾದ ಊಟೋಪಚಾರ ವ್ಯವಸ್ಥೆ ಕಲ್ಪಿಲಾಗಿದೆ.ಪಟ್ಟಣದ ವಾಯ್.ಟಿ.ಎಸ್.ಎಸ್.ಮೈದಾನ, ಶ್ರೀರಾಮ ರೆಸಿಡೆನ್ಸಿ ಸಮೀಪ ಹಾಗೂ ಮಾದರಿ ಶಾಲೆಯ ಆವರಣದಲ್ಲಿರುವ ಅಮ್ಯೂಸ್ ಮೆಂಟ್ ಪಾರ್ಕ್ ಗಳು ಜನರ ಆಕರ್ಷಣೆಯ ಕೇಂದ್ರಗಳಾಗಿದ್ದು, ಇಲ್ಲಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
