ಸುದ್ದಿ ಕನ್ನಡ ವಾರ್ತೆ

ಶಿರಸಿ: ಪ್ರಸ್ತಾಪಿತ ಬೇಡ್ತಿಯನ್ನು ವರದಾ ನದಿಗೆ, ಅಘನಾಶಿನಿಯನ್ನು ವೇದಾವತಿ ನದಿಗೆ ಜೋಡಿಸುವ ಯೋಜನೆಯನ್ನು‌ ಕೈ ಬಿಡುವ ಹಕ್ಕೊತ್ತಾಯ ಶಿರಸಿಯಲ್ಲಿ ಭಾನುವಾರ ನಡೆದ ಜನ ಸಮಾವೇಶ ಉಭಯ ಸರಕಾರಗಳನ್ನು ಆಗ್ರಹಿಸಲಾಯಿತು‌.

ಸೋಂದಾ ಸ್ವರ್ಣವಲ್ಲೀ‌ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ‌ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ‌ ಕರೆ ನೀಡಿದ್ದ ಜನ ಸಮಾವೇಶದಲ್ಲಿ ೨೫ ಸಾವಿರಕ್ಕೂ ಅಧಿಕ ಜನರು ಆಗಮಿಸಿ ಯೋಜನೆ ವಿರೋಧಿಸಿ ಧ್ವನಿ‌ಮೊಳಗಿಸಿದರು.

ಈ ಯೋಜನೆ ಬೇಡ ಎಂದು‌ ಮಠಾಧೀಶರು, ಜನಪ್ರತಿನಿಧಿಗಳು ಒಕ್ಕೊರಲಿನಿಂದ ಹೇಳಿದರು‌.
ಈ ವೇಳೆ ಪಶ್ಚಿಮ ಘಟ್ಟದಲ್ಲಿ ಬೇಡ್ತಿ ಅಘನಾಶಿಸಿ ಸೇರಿದಂತೆ ಬೃಹತ್ ನದಿ ತಿರುವು ಯೋಜನೆಗಳನ್ನು, ಶರಾವತಿ ಪಂಪ್ ಸ್ಟೋರೇಜ್ ಸೇರಿದಂತೆ ಬೃಹತ್ ಜಲ ವಿದ್ಯುತ್‌ ಯೋಜನೆಗಳನ್ನು ಜಾರಿ ಮಾಡಬಾರದು ಎಂದು ಸಮಾವೇಶ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಆಗ್ರಹಿಸಿತು.

ಶಿರಸಿ ಮತ್ತು ಬೆಂಗಳೂರಿನಲ್ಲಿ ವಿಜ್ಞಾನಿಗಳು, ನೀರಾವರಿ ತಜ್ಞರು ಸಭೆ ಸೇರಿ ನದಿ ತಿರುವು ಯೋಜನೆಗಳು ಸೂಕ್ಷ್ಮ ಪಶ್ಚಿಮ ಘಟ್ಟದ ಮಡಿಲಿಗೆ ಬೇಡ, ಉತ್ತರ ಕನ್ನಡ ಜಿಲ್ಲೆಯ ಪರಿಸರ ಧಾರಣ ಸಾಮರ್ಥ್ಯ ಈಗಾಗಲೇ ಮುಗಿದಿದೆ ಎಂದು ವರದಿ ನೀಡಿದ್ದಾರೆ. ಆದ್ದರಿಂದ ಸರ್ಕಾರ ಜನಾಭಿಪ್ರಾಯವನ್ನು ಪರಿಗಣಿಸಿ ನದಿ ತಿರುವು ಯೋಜನೆಗಳನ್ನು ಶಾಶ್ವತವಾಗಿ ಕೈ ಬಿಡಬೇಕು ಎಂದು ರೈತರು, ವನವಾಸಿಗಳು, ಮೀನುಗಾರರು ಪಾಲ್ಗೊಂಡಿರುವ ಈ ಸಮಾವೇಶ ಆಗ್ರಹಿಸಿತು.

ರಾಜ್ಯದ ಮುಖ್ಯಮಂತ್ರಿಗಳು ಈ ಹಿಂದೆ ನಿಯೋಗ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನೀರಾವರಿ ಇಲಾಖೆ ತಜ್ಞರು, ಉನ್ನತ ಅಧಿಕಾರಿಗಳು, ಜನ ಪ್ರತಿನಿಧಿಗಳು ಹಾಗೂ ಬೇಡ್ತಿ ಅಘನಾಶಿಸಿ ಕೊಳ್ಳಿ ಸಂರಕ್ಷಣಾ ಸಮಿತಿಯ ಪ್ರಮುಖರ ಸಭೆ ಏರ್ಪಡಿಸುವ ಆಶ್ವಾಸನೆಯನ್ನು ನೀಡಿದ್ದರು. ಅದರಂತೆ ಸಭೆಯ ದಿನಾಂಕವನ್ನು ಆದಷ್ಟು ಬೇಗ ನಿಗದಿಪಡಿಸಬೇಕು.
ಜಿಲ್ಲೆಯ ಸಂಸದರು ಹಾಗೂ ಎಲ್ಲ ಶಾಸಕರ ನೇತೃತ್ವದಲ್ಲಿ ಬೇಡ್ತಿ-ಅಘನಾಶಿಸಿ ಕೊಟ್ಟ ಸಂರಕ್ಷಣಾ ಸಮಿತಿ ನಿಯೋಗ ಕೇಂದ್ರ ಪರಿಸರ-ಅರಣ್ಯ ಹಾಗೂ ನೀರಾವರಿ ಸಚಿವರನ್ನು ಭೇಟಿ ಮಾಡುವ ದಿನಾಂಕವನ್ನು ಶೀಘ್ರವೇ ನಿಶ್ಚಯಿಸಲು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಮುಂದಾಗಬೇಕು.
ಬೇಡ್ತಿ-ವರದಾ ಹಾಗೂ ಅಘನಾಶಿಸಿ-ವೇದಾವತಿ ನದಿ ತಿರುವು ಯೋಜನೆಗಳ ಬಗ್ಗೆ ಡಿ.ಪಿ.ಆರ್ ತಯಾರಿಸಲು ರಾಜ್ಯ ಸರ್ಕಾರ ನೀಡಿರುವ ಒಪ್ಪಿಗೆಯನ್ನು ಹಿಂಪಡೆಯಬೇಕು.

ಬೇಡ್ತಿ-ಅಘನಾಶಿಸಿ ಕಣಿವೆಗಳಲ್ಲಿ ನದಿ ತಿರುವು ಯೋಜನೆಗಳ ಸ್ಥಳ ಸಮೀಕ್ಷೆಗೆ ಅರಣ್ಯ ಇಲಾಖೆ ಯಾವತ್ತೂ ಅನುಮತಿ ನೀಡಬಾರದು ಎಂದು ರಾಜ್ಯ ಅರಣ್ಯ ಸಚಿವರನ್ನು ಸಮಾವೇಶ ಒತ್ತಾಯಿಸಿತು.
ಬೇಡ್ತಿ-ಅಘನಾಶಿಸಿ ನದಿ ತೀರ ಪ್ರದೇಶದ ಜನರಿಗೆ ಅತೀ ಅವಶ್ಯವಾದ ನೀರಾವರಿ ವ್ಯವಸ್ಥೆ ಕಲ್ಪಿಸಲು ವಿಶೇಷ ಜನಸಹಭಾಗಿತ್ವದ ಕಿರು ನೀರಾವರಿ ಯೋಜನೆ ಪ್ರಕಟಿಸಲು ಸರ್ಕಾರವನ್ನು ಸಮಾವೇಶ ಆಗ್ರಹಿಸಿತು‌.
ಮಾನವ ಹಕ್ಕು ಕಾಯಿದೆ ಜಾರಿಗೆ ತಂದ ಮಾದರಿಯಲ್ಲಿಯೇ ನದಿಗಳಿಗೂ ಜೀವಿಸುವ ಹಕ್ಕು ಹಾಗೂ ನದಿಗಳ ನೈಸರ್ಗಿಕ ಸ್ವಚ್ಛ ಹರಿವು ಉಳಿಸಿಕೊಳ್ಳುವ ಹಕ್ಕು ನೀಡುವ ಕಾನೂನು ಜಾರಿಗೆ ತರಲು ಕೇಂದ್ರ, ಹಾಗೂ ರಾಜ್ಯ ಸರ್ಕಾರಗಳು ಮುಂದಾಗಬೇಕು ಹಾಗೂ ಜನ ಪ್ರತಿನಿಧಿಗಳು ಆದ್ಯತೆ ಮೇರೆಗೆ ಕಾಯಿದೆ ರೂಪಿಸಲು ಮುಂದಾಗಬೇಕು ಎಂದು ಸಮಾವೇಶ ಕರೆ ನೀಡಿತು. ಅಹಿಂಸಾತ್ಮಕವಾಗಿ ಪಶ್ಚಿಮ ಘಟ್ಟ ಉಳಿಸಿ ಚಳುವಳಿ ನಡೆಸಲು ಸಮಾವೇಶ ನಿರ್ಧರಿಸಿತು.

ಈ ವೇಳೆ ಜೈನ ಮಠದ ಶ್ರೀಗಳು, ಶ್ರೀಮನ್ನೆಲೆಮಾವು ಮಠದ ಶ್ರೀಗಳು, ಜಡೆ ಶ್ರೀಗಳು, ಶಿರಳಗಿ ಸ್ವಾಮೀಜಿಗಳು, ಸಚಿವ ಮಂಕಾಳು ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ, ಶಾಂತಾರಾಮ ಸಿದ್ದಿ, ಅನಂತ ಹೆಗಡೆ ಸೇರಿದಂತೆ ಇತರರು ಇದ್ದರು.