ಸುದ್ದಿಕನ್ನಡ ವಾರ್ತೆ
ಶಿರಸಿ:  ಹವಾಮಾನ‌ ಆಧರಿತ ಬೆಳೆ ವಿಮೆಗೆ‌ ಸಂಬಂಧಿಸಿ ಉತ್ತರ ಕನ್ನಡ ಜಿಲ್ಲೆಗೆ ನ್ಯಾಯಕ್ಕೆ ಹಕ್ಕೊತ್ತಾಯ ಸಂಬಂಧಿಸಿ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ್ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಸಭೆ ‘ತ್ರಿವಳಿ ಸೂತ್ರ’ ಸಿದ್ಧಪಡಿಸಿದೆ.
ನಗರದ ಕೆಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಸೇರಿದ್ದ ಜಿಲ್ಲೆಯ ಪ್ರಾಥಮಿಕ‌ ಪತ್ತಿನ ಸಹಕಾರಿ ಸಂಘಗಳ ಪ್ರಮುಖರು ವಿಮಾ‌ ಕಂಪನಿಯ ನಡೆಯನ್ನು ಖಂಡಿಸಿ ಮಾತನಾಡಿ, ನ್ಯಾಯಾಲಯದ ಮೊರೆಗೆ ಒತ್ತಾಯ ಹೇರಿದರು.
ರೈತರು ಅತಿ ಮಳೆಗೆ ಬೆಳೆ ಕಳೆದುಕೊಂಡು ನಷ್ಟದಲ್ಲಿದ್ದಾರೆ.  ಈ ನಷ್ಟ ಭರಣಕ್ಕೆ ಕೊಂಚವಾದರೂ ಬೆಳೆ ವಿಮೆ ನೆರವಾಗುತ್ತಿತ್ತು. ಆದರೆ, ಇಲಾಖೆಯ‌ ಮಾಹಿತಿ ಪ್ರಕಾರ ೮೨ ಕೋ.ರೂ. ಪರಿಹಾರ ಬರಬೇಕಿತ್ತು. ಕೇವಲ ೧೦.೯೨ ಕೋ.ರೂ. ಬಂದಿದೆ. ೧೩೬ ಗ್ರಾಮ ಪಂಚಾಯ್ತಿ ಭಾಗದ ರೈತರಿಗೆ ಪರಿಹಾರ ಬಂದಿಲ್ಲ. ಕೇವಲ ೫೭ ಪಂಚಾಯ್ತಿಗಳಿಗೆ ಮಾತ್ರ ವಿಮಾ ಪರಿಹಾರ ಬಂದಿದೆ. ಕೆಲವೇ‌ ಪಂಚಾಯ್ತಿಳಿಗೆ ಮಾತ್ರ ಪರಿಹಾರ‌ ನೀಡಿದ್ದು ಅಕ್ಷಮ್ಯ ಎಂಬ ಅಭಿಪ್ರಾಯ  ವ್ಯಕ್ತಪಡಿಸಿದರು.
ಬಳಿಕ‌ ಮಾತನಾಡಿದ ಶಾಸಕ ಹೆಬ್ಬಾರ್ ಜಿಲ್ಲೆಯ ರೈತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ತ್ರಿವಳಿ ಸೂತ್ರ ಮುಂದಿಟ್ಟರು. ಮೊದಲ ಹಂತದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ  ಮಾತನಾಡಿ ಸಾಧ್ಯವಿದ್ದಷ್ಟು ಸಂಧಾನದ ಮೂಲಕ ವಿಮೆ ಕಂಪನಿಯಿಂದ ನೆರವು ಕೊಡಿಸಬೇಕು. ಕೇಂದ್ರ ಸರಕಾರದ ಮಾತನ್ನು ವಿಮಾ ಕಂಪನಿ ಕೇಳುತ್ತದೆ.  ಮುಂದೆ ಅಧಿವೇಶನ ಕೂಡ ಬರುವದರಿಂದ ವಾರವೋ, ಹದಿನೈದು ದಿನವೋ‌ ಕಾಲ ನೀಡಬೇಕು ಹಾಗೂ ಅವರ‌ ಸಲಹೆ ಪಡೆಯಬೇಕು ಎಂದರು.
ಎರಡನೇಯದಾಗಿ ಕೆಡಿಸಿಸಿ ಬ್ಯಾಂಕ್ ಕೂಡ ಆಡಳಿತ ಮಂಡಳಿಯ ಸಭೆಯಲ್ಲಿ ಕೋರ್ಟ ಮೂಲಕ ರೈತರಿಗೆ ನ್ಯಾಯ ಕೊಡಿಸಲು ಮುಂಚೂಣಿಯಲ್ಲಿ ಇರಲು ಸಮ್ಮತಿಸಿದೆ. ಹಿರಿಯ ನ್ಯಾಯವಾದಿ ಅರುಣಾಚಲ ಹೆಗಡೆ ಅವರ ಜೊತೆ ಚರ್ಚೆ ಮಾಡಿ, ಅವರ ಅಥವಾ ಅವರ ಮಾರ್ಗದರ್ಶನದಲ್ಲಿ
ಅನಿವಾರ್ಯವಾಗಿ ಬೆಳೆ ವಿಮೆಗಾಗಿ ೧೩೬ ಪಂಚಾಯ್ತಿಗಳಿಂದ ಜಿಲ್ಲಾ ಕಡೆ ಕೆಸಿಸಿಬ್ಯಾಂಕ್ ಮೂಲಕ ಹೈಕೋರ್ಟಗೆ  ಹೋಗಲು ತೀರ್ಮಾನ ಕೈಗೊಳ್ಳಬೇಕಾಗಬಹುದು. ಹಾಗೂ‌ ಮೂರನೇಯದಾಗಿ ಇನ್ನೂ ಒಂದು ವರ್ಷದ ಅವಧಿಗೆ ವಿಮಾ ಅವಕಾಶ ಪಡೆದ  ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ಒತ್ತಡ ತರಬೇಕು. ರಾಜಕೀಯ ಬಿಟ್ಟು ರೈತರಿಗೆ ನ್ಯಾಯ ಕೊಡಿಸಲು ಮುಂದಾಗಬೇಕು ಎಂದಾಗ ಸಭೆ‌‌ವಸಮ್ಮತಿಸಿತು.
ಈ ವೇಳೆ ಶಿರಸಿ ಟಿಎಂಎಸ್ ಅಧ್ಯಕ್ಷ ಜಿ.ಟಿ.ಹೆಗಡೆ ತಟ್ಟಿಸರ, ಮೋಹನದಾಸ ನಾಯಕ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಬಿಳಗಿ ರಾಘವೇಂದ್ರ, ರಾಮಕೃಷ್ಣ ಹೆಗಡೆ‌ ಕಡವೆ, ಆರ್.ಎನ್.ಹೆಗಡೆ ಗೊರ್ಸಗದ್ದೆ, ಎನ್.ಬಿ.ಮತ್ತೀಹಳ್ಳಿ, ಎಸ್ .ಎನ್.ಹೆಗಡೆ ದೊಡ್ನಳ್ಳಿ, ತೋಟಗಾರಿಕಾ ಅಧಿಕಾರಿ ಬಿ.ಪಿ.ಸತೀಶ, ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಶ್ರೀಕಾಂತ ಭಟ್ಟ ಸೇರಿದಂತೆ ಅನೇಕ ಸಹಕಾರಿಗಳು ಪಾಲ್ಗೊಂಡಿದ್ದರು.