ಸುದ್ಧಿಕನ್ನಡ ವಾರ್ತೆ
ಕಲಘಟಗಿ: ಸೇತುವೆಯ ಮೇಲೆ ನೀರು ಹರಿಯುತ್ತಿರುವಾಗ ಕಾರು ಚಲಾಯಿಸಿದ ವ್ಯಕ್ತಿಯೋರ್ವ ನೀರಲ್ಲಿ ಕೊಚ್ಚಿ ಹೋದ ಘಟನೆ ನಡೆದಿದ್ದು, ಮರದ ಕೊಂಬೆ ಹಿಡಿದು ನಿಂತ ವ್ಯಕ್ತಿ ಸಹಾಯಕ್ಕಾಗಿ ಕೂಗಿ ಕರೆದು ಬಚಾವಾದ ಘಟನೆ ಉತ್ತರ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಕಲಘಟಗಿ ಬೇಡ್ತಿ ಸೇತುವೆಯ ಬಳಿ ಸಂಭವಿಸಿದೆ.

ಪುಡಲಕಟ್ಟಿ ಗ್ರಾಮದ ನಾಗರಾಜ ದೇವಣ್ಣನವರ್ ರವರು ಸೋಮವಾರ ರಾತ್ರಿ ಸುರಿದ ಭಾರಿ ಮಳೆಯ ಸಂದರ್ಭದಲ್ಲಿ ಬೇಡ್ತಿ ನದಿ ಸೇತುವೆಯ ಮೇಲೆ ಕಾರು ಚಲಾಯಿಸಿಕೊಂಡು ಹೋಗುತ್ತಿರುವಾಗ ಸೇತುವೆಯ ಮೇಲೆ ಹರಿಯುತ್ತಿದ್ದ ನೀರಿನ ರಭಸಕ್ಕೆ ಅವರು ಕಾರಿನ ಸಮೇತ ಕೊಚ್ಚಿ ಹೋದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಅದೃಷ್ಠವಶಾತ್ ಮರದ ಕೊಂಬೆಯೊಂದು ಸಿಕ್ಕಿದ್ದರಿಂದ ಆ ಕೊಂಬೆಗೆ ಜೋತುಕೊಂಡು ರಕ್ಷಣೆಗಾಗಿ ಕೂಗಲು ಆರಂಭಿಸಿದರು.
ಅಷ್ಟರಲ್ಲಿ ಬಸವರಾಜ ದೇಸೂರ ಎಂಬುವರು ಸ್ಥಳಕ್ಕೆ ಧಾವಿಸಿ ಬಂದು ಪರಿಸ್ಥಿತಿ ಕಂಡು ರಾತ್ರಿ 11.30 ರ ಸುಮಾರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರು. ಕೂಡಲೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ನೀರಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಾಗಕ್ಕೆ ಹೊಂದಿಕೊಂಡಿರುವ ಕಲಘಟಗಿ ತಾಲೂಕಿನ ಬೇಗೂರು ಬಿಸರಳ್ಳಿ ಹಾಗೂ ಹಿರೇಹೊನ್ನಳ್ಳಿ ಗ್ರಾಮ ಸಂಪರ್ಕಿಸುವ ಮಧ್ಯ ಭಾಗದಲ್ಲಿರುವ ಬೇಡ್ತಿ ನದಿ ಸೇತುವೆಯಲ್ಲಿ ಈ ಘಟನೆ ನಡೆದಿದೆ.