ಸುದ್ಧಿಕನ್ನಡ ವಾರ್ತೆ
ಅಂಕೋಲಾ: ಶಿರೂರು ಗುಡ್ಡ ಕುಸಿತ ದುರ್ಘಟನೆ ಸಂಭವಿಸಿ ಹಲವು ದಿನಗಳೇ ಗತಿಸಿಹೋದರೂ ಈ ದುರ್ಘಟನೆ ಜನರ ಮನಸ್ಸಿನಿಂದ ಮಾಸುವಂತಿಲ್ಲ. ಕೇರಳದ ಭಾರತ್ ಬೆಂಜ್ ಟ್ರಕ್ ಚಾಲಕ ಅರ್ಜುನ ಮೃತದೇಹ ಪತ್ತೆಯಾಗಿದ್ದು ಮಗನಿಗಾಗಿ ಖರೀದಿಸಿದ್ದ ಸಣ್ಣ ಆಟಿಕೆ ಟ್ರಕ್ ಕೂಡ ಸಿಕ್ಕಿದ್ದು, ಕರಳು ಚುರುಗುಡುವಂತಿದೆ.
ಅರ್ಜುನ್ ಮೃತದೇಹ ಎರಡು ತುಂಡಾದ ಅವಸ್ಥೆಯಲ್ಲಿ ಪತ್ತೆಯಾಗಿದೆ. ಅರ್ಜುನ್ ಮತ್ತೆಯ ಬಳಿಕವೂ ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ಶಿರೂರು ಗ್ರಾಮದ ಜಗನ್ನಾಥ ನಾಯ್ಕ, ಗಂಗೆಕೊಳ್ಳದ ಲೋಕೇಶ್ ನಾಯ್ಕ ಕೂಡ ಕಣ್ಮರೆಯಾಗಿದ್ದು ಅವರ ಹುಡುಕಾಟವೂ ಮುಂದುವರೆದಿದೆ. ಲಕ್ಷ್ಮಣ ನಾಯ್ಕ ಹೋಟೆಲ್ ಮುಂಭಾಗದಲ್ಲಿ ಬಿದ್ದಿರುವ ಮಣ್ಣಿನ ರಾಶಿಯ ಅಡಿಯಲ್ಲಿ ಅವರಿಬ್ಬರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.
ಅರ್ಜುನ್ ಲಾರಿಯನ್ನು ಮೇಲೆತ್ತಿದ ಬಳಿಕ ಅರ್ಜುನ್ ಬಳಸುತ್ತಿದ್ದ ವಿವಿಧ ವಸ್ತುಗಳು ಕೂಡ ಪತ್ತೆಯಾಗಿದ್ದು, ಮೊಬೈಲ್ ಕೂಡ ಸಿಕ್ಕಿದೆ. ಅರ್ಜುನ್ ತನ್ನ ಮಗನಿಗಾಗಿ ಖರೀದಿಸಿದ್ದ ಪುಟ್ಟ ಟ್ರಕ್ ಕೂಡ ಸಿಕ್ಕಿದ್ದು, ಈ ದೃಶ್ಯ ಮನ ಕಲಕುವಂತಿದೆ. ಗಂಗಾವಳಿ ನದಿಯಲ್ಲಿ ಇನ್ನೂ ಭಾರಿ ಪ್ರಮಾಣದಲ್ಲಿ ಮಣ್ಣಿನ ರಾಶಿಯೇ ಇದ್ದು ಈ ಮಣ್ಣಿನ ಅಡಿಯಲ್ಲಿ ಇನ್ನೂ ಏನೇನು ಸಿಲುಕಿದೆಯೋ ಎಂಬುದು ಇನ್ನೂ ಪ್ರಶ್ನೆಯಾಗಿ ಉಳಿದಿದೆ.