ಸುದ್ದಿ ಕನ್ನಡ ವಾರ್ತೆ

ದಾಂಡೇಲಿ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಬಜರಂಗ ದಳದ ವತಿಯಿಂದ ನಗರದ ಸೋಮಾನಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆಯನ್ನು ನಡೆಸಿ, ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿರುವ ಬಾಂಗ್ಲಾದೇಶದ ಮೇಲೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಮತ್ತು ಈ ದೌರ್ಜನ್ಯವನ್ನು ತಡೆಯಲು ವಿಶ್ವಸಂಸ್ಥೆ ಮಧ್ಯಪ್ರವೇಶಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಶೈಲೇಶ ಪರಮಾನಂದ ಅವರ ಮೂಲಕ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರಾದ ರೊಷನ್ ನೇತ್ರಾವಳಿಯವರು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸೆ, ದೌರ್ಜನ್ಯ ಖಂಡನೀಯ. ಹಿಂದೂ ಸಮಾಜ ಜಾಗೃತರಾಗಿ ಸಂಘಟಿತರಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಮಗೂ ಇಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದರು. ಶೇಖ್ ಹಸೀನಾ ಅವರ ಅವಾಮಿ ಲೀಗ್ ಸರ್ಕಾರ ಪತನವಾದ ನಂತರ ಬಾಂಗ್ಲಾದೇಶದ 50 ಜಿಲ್ಲೆಗಳಲ್ಲಿ ಹಿಂದೂಗಳ ಮೇಲೆ 200 ಕ್ಕೂ ಹೆಚ್ಚು ದಾಳಿಗಳು ನಡೆದಿವೆ. ಇಸ್ಕಾನ್ ಸನ್ಯಾಸಿ ಚಿನ್ಮಯಿ ಕೃಷ್ಣದಾಸ್ ಅವರನ್ನು ಕೂಡಲೇ ಜೈಲಿನಿಂದ ಬಿಡುಗಡೆ ಮಾಡಬೇಕು. ಕೂಡಲೇ ವಿಶ್ವಸಂಸ್ಥೆ ಮಧ್ಯಪ್ರವೇಶಿಸಿಸಬೇಕೆಂದು ಆಗ್ರಹಿಸಿದರು.

ಇನ್ನೋರ್ವ ಮುಖಂಡರಾದ ಸುಧಾಕರ ರೆಡ್ಡಿ ಅವರು ಮಾತನಾಡಿ ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯ ತಡೆಗೆ ಕೇಂದ್ರ ಸರ್ಕಾರ ತನ್ನ ಪ್ರಯತ್ನಗಳನ್ನು ಮುಂದುವರೆಸಬೇಕು. ಆದಷ್ಟು ಬೇಗ ಈ ಕುರಿತು ಜಾಗತಿಕ ಅಭಿಪ್ರಾಯ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.

ಬಜರಂಗದಳದ ಜಿಲ್ಲಾ ಸುರಕ್ಷಾ ಪ್ರಮುಖರಾದ ಚಂದ್ರು ಮಾಳಿ ಅವರು ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಮಧ್ಯಪ್ರವೇಶಿಸಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಘಟಕದ ಅಧ್ಯಕ್ಷರಾದ ಬುದವಂತಗೌಡ ಪಾಟೀಲ್, ಬಜರಂಗ ದಳದ ತಾಲೂಕು ಸಂಚಾಲಕ ನಾಗರಾಜ ಅನಂತಪುರ, ಬಜರಂಗದಳದ ಪ್ರಮುಖರು, ಕಾರ್ಯಕರ್ತರು, ಹಿಂದೂಪರ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.