ಸುದ್ದಿ ಕನ್ನಡ ವಾರ್ತೆ

ದಾಂಡೇಲಿ : ಶ್ರೀ ಪವನ ಸೇವಾ ಸಮಿತಿ ಟ್ರಸ್ಟ್ ಆಶ್ರಯದಡಿ ದಾಂಡೇಲಿಯ ನಿರ್ಮಲ ನಗರದ ಶ್ರೀ ಮಾರುತಿ ಮಂದಿರದಲ್ಲಿ ಶ್ರೀ ಮಾರುತಿ ದೇವರ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸ ಪ್ರತಿಷ್ಠಾಪನೆ ಹಾಗೂ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮವು ಬುಧವಾರ ಶ್ರದ್ಧಾಭಕ್ತಿಯಿಂದ ಜರುಗಿತು.

ಮಂಗಳವಾರದಿಂದಲೇ ವಿವಿಧ ಪೂಜಾರಾಧನೆಗಳು ಆರಂಭಗೊಂಡಿದ್ದವು. ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಪೂಜ್ಯ ಶ್ರೀ ಮಾರುತಿ ಗುರೂಜಿ ಅವರು ಭೇಟಿ ನೀಡಿ, ಆಶೀರ್ವಚನವನ್ನು ನೀಡಿದರು. ಮಂದಿರವನ್ನು ನಿರ್ಮಿಸಿದರಷ್ಟೇ ಸಾಲದು. ಅಷ್ಟೇ ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ರಾಮನ ಭಕ್ತನಾದ ಹನುಮನ ಮಂದಿರ ಇಂದು ಅಯೋಧ್ಯೆಯ ರಾಮಮಂದಿರದ ಮೊದಲ ಪ್ರತಿಷ್ಠಾಪನಾ ಮಹೋತ್ಸವದ ಈ ಶುಭದಿನದಂದು ಉದ್ಘಾಟನೆಗೊಂಡಿರುವುದು ಬಹಳ ಸಂತಸ ತಂದಿದೆ. ಭಕ್ತಿಯಿಂದ ಮಾಡುವ ಆರಾಧನೆಯಿಂದ, ಪೂಜಾ ಕಾರ್ಯಗಳಿಂದ ಪುಣ್ಯಪ್ರಾಪ್ತಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಶ್ರದ್ಧಾಭಕ್ತಿಯಿಂದ ಹನುಮನ ಮೂರ್ತಿ ಪ್ರತಿಷ್ಠಾಪನೆಯಾಗಿದ್ದು ಹನುಮ ಸರ್ವರಿಗೂ ಸದಾ ಸನ್ಮಂಗಲವನ್ನು ದಯಪಾಲಿಸಲೆಂದು ಶುಭವನ್ನು ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿದ್ದರು.

ಮಧ್ಯಾಹ್ನ ಮಹಾಪೂಜೆಯಾದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಶ್ರೀ ಪವನ ಸೇವಾ ಸಮಿತಿ ಟ್ರಸ್ಟಿನ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯ ಭಕ್ತಾಭಿಮಾನಿಗಳು ಶ್ರಮಿಸಿದ್ದರು.