ಸುದ್ದಿ ಕನ್ನಡ ವಾರ್ತೆ

ಶಿರಸಿ: ಯಾವುದೇ ಸಭೆ, ಸಮಾರಂಭ, ಮಂಗಲಕಾರ್ಯ ಯಶಸ್ಸಾಗಬೇಕು ಎಂದರೂ ಊಟೋಪಚಾರ ವ್ಯವಸ್ಥೆಯೂ‌ ಮುಖ್ಯ ಕಾರಣ. ಈ ನಿಟ್ಟಿನಲ್ಲಿ ಬಾಣಸಿಗರ ಶ್ರಮ ಅಭಿನಂದನೀಯ. ಅದನ್ನು‌ ಸಮಾಜ‌ ಕೂಡ ಗುರುತಿಸಿ ಅವರನ್ನು ಗೌರವಿಸುವ ಕಾರ್ಯ ಹೆಚ್ಚಬೇಕು ಎಂದು ಶ್ರೀಕ್ಷೇತ್ರ ಹೊರನಾಡಿನ ಧರ್ಮಕರ್ತ ಭೀಮೇಶ್ವರ ಜೋಶಿ ಹೇಳಿದರು.

ಭಾನುವಾರ ಅವರು‌ ತಾಲೂಕಿನ ಯಡಳ್ಳಿಯ ಸುಕರ್ಮ ಯಾಗ ಶಾಲೆಯಲ್ಲಿ ರವಿವಾರ ಬಾಣಸಿಗರ ಸಮಾವೇಶ ಹಾಗೂ ಅನ್ನಪೂರ್ಣೇಶ್ವರಿ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದರು.

ಒಂದು ಕಾರ್ಯಕ್ರಮದ ಯಶಸ್ಸಿಗೆ ಬಾಣಸಿಗರ ಶ್ರಮ ದೊಡ್ಡದು. ಅದನ್ನು ಅತ್ಯಂತ ಶುಚಿ ರುಚಿಯಾಗಿ ನಡೆಸಿಕೊಂಡು ಬಂದು ತಾಯಿ ಅನ್ನಪೂರ್ಣೇಶ್ವರಿ ಸೇವಾ ಕಾರ್ಯ ಎಂದು ಮಾಡುತ್ತಿರುತ್ತಾರೆ. ಅಂಥ ಬಾಣಸಿಗರನ್ನು ಒಂದೇ ವೇದಿಕೆಗೆ ಕರೆತರುವ ಸುಕರ್ಮದ ಕಾರ್ಯ ಕೂಡ ಅಭಿನಂದನೀಯ ಎಂದರು.

ಮಲೆನಾಡು ಭಾಗದಲ್ಲಿ, ಅದರಲ್ಲೂ ಶಿರಸಿ‌ ಸೀಮೆಯಲ್ಲಿ ಬಾಣಸಿಗರು, ಅಡುಗೆ‌ ಮಾಡುವವರು ಎಂದರೆ ಅಡುಗೆ ಭಟ್ಟರು‌, ಪುರುಷರು ಎಂಬ ಭಾವನೆ ಇದೆ. ಆದರೆ, ವಿಶೇಷವಾಗಿ‌ ಮಹಿಳೆಯರು ಮನೆಯ ಕೆಲಸದ ಮಧ್ಯೆ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇಂದು ದೊಡ್ಡ ಶಹರಗಳಲ್ಲಿ ಕ್ಯಾಟರಿಂಗ್ ಹೆಸರಿನಲ್ಲಿ‌ ನಡೆಯುತ್ತಿದೆ. ಮಲೆನಾಡು, ಕರಾವಳಿ‌ ಭಾಗದಲ್ಲಿ ಈ ಅಡುಗೆ ವ್ಯವಸ್ಥೆ ಹಳೆ ಸಂಪ್ರದಾಯದಂತೆ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಅಡುಗೆಯವರಿಗೆ ಸಂಘಟನೆ ಬೇಕಿದೆ. ಜೊತೆಗೆ ಕಾರ್ಮಿಕ ಇಲಾಖೆ ಹಾಗೂ ಇತರ ಇಲಾಖೆಯ ಅಡಿಯಲ್ಲಿನ ಸೌಲಭ್ಯ ಕೊಡಿಸುವ ಕಾರ್ಯ ಆಗಬೇಕಿದೆ. ಇದಕ್ಕೆ ಸಮಾಜದ ಪ್ರತಿನಿಧಿಗಳೂ ಕೂಡ ನೆರವಾಗಬೇಕು. ಅನ್ನಪೂರ್ಣೇಶ್ವರಿ‌ ಕ್ಷೇತ್ರ ಕೂಡ ಬಾಣಸಿಗರ ನೆರವಿಗೆ ಸಿದ್ಧವಿದೆ ಎಂದ ಅವರು, ಅಡುಗೆ ಭಟ್ಟರಿಗೆ ವಿವಾಹ ಆದವರಿಗೆ ಹೊರನಾಡು ಕ್ಷೇತ್ರದಿಂದ ಗೌರವಿಸಿ ಪ್ರೋತ್ಸಾಹಿಸಲಾಗುತ್ತದೆ ಎಂದರು.
ಅಂಕಣಕಾರ, ಹೆಸರಾಂತ ಜ್ಯೋತಿಷಿ ವಿ.ಡಿ.ಭಟ್ಟ‌ ಕರಸುಳ್ಳಿ, ಯಡಹಳ್ಳಿಯ ಸುಕರ್ಮಾಕ್ಕೆ ಎರಡನೇ ವರ್ಷದ ವಾರ್ಷಿಕೋತ್ಸವ. ಇದು ಕೇವಲ ಧಾರ್ಮಿಕ ಕೇಂದ್ರ ಮಾತ್ರ ಆಗಿರದೆ ಸಾಹಿತ್ಯಿಕ, ಆಧ್ಯಾತ್ಮಿಕ, ಸಾಂಸ್ಕೃತಿಕವಾಗಿ ಕೂಡ ಚಟುವಟಿಕೆ ನಡೆಲಾಗುತ್ತದೆ. ಅಡುಗೆಯವರನ್ನು ನಿರ್ಲಕ್ಷ್ಯವಾಗಿ ನೋಡಬಾರದು ಎಂದು‌ ಸಮಾವೇಶ ಆಯೋಜಿಸಲು ಮುಂದಾದೆವು ಎಂದರು.

ವೇದಿಕೆಯಲ್ಲಿ ಹಿರಿಯ ವೈದಿಕ ದತ್ತಾತ್ರಯ ಭಟ್ಟ ಕರಸುಳ್ಳಿ, ರಾಜೇಶ್ವರಿ ಜೋಶಿ ಹೊರನಾಡು, ಪದ್ಮಾವತಿ ಭಟ್ಟ ಇತರರು ಇದ್ದರು.

ಜನಾರ್ಧನ ಆಚಾರ್ಯ ಶರ್ಮಾ ಯಡಹಳ್ಳಿ ನಿರ್ವಹಿಸಿದರು. ಬಳಿಕ ಶಿರಸಿ ನಾಡಿಗಗಲ್ಲಿಯ ಉಮಾಮಹೇಶ್ವರ ಭಜನಾ ಮಂಡಳಿಯಿಂದ ಭಜನೆ ನಡೆಯಿತು. ಸಮಾವೇಶದಲ್ಲಿ ಶಿರಸಿ ಸಿದ್ದಾಪುರ, ಯಲ್ಲಾಪುರ ಭಾಗದಿಂದ ೩೫೦ಕ್ಕೂ ಅಧಿಕ ಬಾಣಸಿಗರು ಸಮಾವೇಶದಲ್ಲಿ ಭಾಗವಹಿಸಿದ್ದರು.