ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ಜಿಲ್ಲಾಡಳಿತ,ಜಿಲ್ಲಾ ಪಂಚಾಯತ ಉತ್ತರಕನ್ನಡ,ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ,ಜೋಯಿಡಾ,ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಜೋಯಿಡಾ,ಸಮೂಹ ಸಂಪನ್ಮೂಲ ಕೇಂದ್ರ,ಕ್ಯಾಸಲ ರಾಕ್ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ದೂದಮಾಳ ಇವರ ಸಂಯುಕ್ತಾಶ್ರಯದಲ್ಲಿ 2025,26ನೇ ಸಾಲಿನ ಕ್ಯಾಸಲರಾಕ್ ಕ್ಲಸ್ಟರ್ ಮಟ್ಟದ ಎಫ್ ಎಲ್ ಎನ್ ಕಲಿಕಾ ಹಬ್ಬ 10 ಜನವರಿ 2026 ರ,ಶನಿವಾರ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ದೂದಮಾಳದಲ್ಲಿ ಎಫ್ ಎಲ್ ಎನ್ ಕಲಿಕಾ ಹಬ್ಬ ಯಶಸ್ವಿಯಾಗಿ ಸಂಪನ್ನಗೊಂಡಿತು.

ಕಾರ್ಯಕ್ರಮದ ಆರಂಭದಲ್ಲಿ ಕ್ಯಾಸಲರಾಕ್ ಕ್ಲಸ್ಟರಿನ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು,ಮುಖ್ಯ ಶಿಕ್ಷಕರು,ಸಹ ಶಿಕ್ಷಕರು,ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು, ನಿರ್ಣಾಯಕರು ಸೇರಿದಂತೆ ಕಾರ್ಯಕ್ರಮದ ಗಣ್ಯರು ಒಳಗೊಂಡಂತೆ ಪಾಲಕರು,ಪೋಷಕರ ಸಮ್ಮುಖದಲ್ಲಿ ವೇದಿಕೆಯ ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರು ಸುಶ್ರಾವ್ಯವಾಗಿ ಸ್ವಾಗತ ಗೀತೆ,ಕಲಿಕಾ ಹಬ್ಬದ ಹಾಡನ್ನು ಹಾಡಿದರು.

ಕಾರ್ಯಕ್ರಮದ ವೇದಿಕೆಯ ಮೇಲಿನ ಗಣ್ಯರನ್ನು ವಿದ್ಯಾರ್ಥಿಗಳಿಂದ ಹೂ ಗುಚ್ಛವನ್ನು ನೀಡುವುದರ ಮೂಲಕ ದೂದಮಳಾ ಶಾಲೆಯ ಮುಖ್ಯ ಶಿಕ್ಷಕರಾದ ಮಂಜುನಾಥ ಮೋರೆ ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉದ್ಘಾಟಕರಾಗಿ ಆಗಮಿಸಿದ್ದ ಬಜಾರಕುಣಂಗ ಗ್ರಾಮ ಪಂಚಾಯತ ಅಧ್ಯಕ್ಷರಾದ ಸುನಿತಾ ಹರಿಜನ ಇನ್ನಿತರ ಗಣ್ಯರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಶುಭಾರಂಭ ಮಾಡಿದರು.ವೇದಿಕೆಯ ಮುಂಭಾಗದ ಮೇಲಿದ್ದ ಬಾಕ್ಸ್ ನೊಳಗಿದ್ದ F L N ಕಲಿಕಾ ಹಬ್ಬದ ಅಕ್ಷರದ ಗೊಂಚಲನ್ನು ರಿಬ್ಬನ್ ಎಳೆಯುವ ಮೂಲಕ ಗಣ್ಯರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಕ್ಯಾಸಲರಾಕ್ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ,ಭಾಸ್ಕರ ಗಾಂವ್ಕರರವರು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿಯಮಾವಳಿ, ವಾರ್ಷಿಕ ಕ್ರಿಯಾ ಯೋಜನೆಯಂತೆ ಪ್ರತಿ ಕ್ಲಸ್ಟರಿನ ಪ್ರತಿಯೊಂದು ಶಾಲೆಯ ಆಯ್ದ ವಿದ್ಯಾರ್ಥಿಗಳು ಕಲಿಕೆಯ ಎಫ್ ಎಲ್ ಎನ್ ಕಲಿಕಾ ಹಬ್ಬದಲ್ಲಿ ಭಾಗವಹಿಸಿ ಒಟ್ಟು 7 ಸ್ಪರ್ಧೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶನ ಮಾಡಿ ಬಹುಮಾನ ಪಡೆಯುವುದು, ಕಲಿಕೆಗೆ ಪ್ರೇರಣೆ ನೀಡುವುದೇ ಕಲಿಕಾ ಹಬ್ಬದ ಮುಖ್ಯ ಉದ್ದೇಶ,ಕಳೆದ ತಿಂಗಳು ಬೊಂಡೇಲಿ ಶಾಲೆಯಲ್ಲಿ ಸುಮಾರು 8 ಶಾಲೆಗಳ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳಿಂದ ಗಡಿಯಲ್ಲೊಂದು ಕಲಿಕಾ ಹಬ್ಬ ಕಾರ್ಯಕ್ರಮದ ನೆನಪು ಹಸಿರಿರುವಾಗಲೇ ಈಗಲೂ ಸಹ ಸಮುದಾಯದ ಸಹಭಾಗಿತ್ವ ಅದೇ ರೀತಿಯಲ್ಲಿ ಮುಂದುವರೆಸಿಕೊಂಡು ಬಂದಿರುವುದು ನಿಮ್ಮೆಲ್ಲರ ಸಹಕಾರಕ್ಕೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಶೀರ್ ಅಹ್ಮದ ಶೇಖ್ ಅವರ ಹಾಗೂ ಇಲಾಖೆಯ ಪರವಾಗಿ ಚಿರಋಣಿ ಎಂದು ಕಲಿಕಾ ಹಬ್ಬ ಕಲಿಕೆಗೆ ಪೂರಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿ ಆರ್ ಪಿ ಶಶಿಕಾಂತ ಹೂಲಿಯವರು ಮಾತನಾಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿನೂತನ ಕಾರ್ಯಕ್ರಮ ಇದಾಗಿದ್ದು,ಇಲ್ಲಿನ ಪಾಲಕರು,ಪೋಷಕರು ತಮ್ಮ ಮಕ್ಕಳ ಜೊತೆ ಎಫ್ ಎಲ್ ಎನ್ ಕಲಿಕಾ ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿಕೆ,ಸಂಘಟನೆ ಮೆಚ್ಚುವಂತಹದ್ದು,ಈಗಾಗಲೇ ಇಲಾಖೆಯ ಮೇಲಾಧಿಕಾರಿಗಳು ಈ ಭಾಗದ ಶೈಕ್ಷಣಿಕ ಕ್ಷೇತ್ರದಲ್ಲಿ ಸಮುದಾಯದವರ ಸಹಭಾಗಿತ್ವದ ಬಗ್ಗೆ ಈ ಹಿಂದೆ ಬೊಂಡೇಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಮೆಚ್ಚುಗೆಯನ್ನು ಸೂಚಿಸಿರುತ್ತಾರೆ.ಪ್ರತಿಯೊಬ್ಬ ಮಗುವು ಮೂಲಭೂತ ಸಾಕ್ಷರತಾ ಶಿಕ್ಷಣ ಜ್ಞಾನ ಪಡೆಯಬೇಕು,ಕಲಿಕಾ ಹಬ್ಬದ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತನ್ಮೂಲಕ ಶಾಲೆಯ,ಊರಿನ,ಶಿಕ್ಷಕರ ಕೀರ್ತಿಯನ್ನು ಹೆಚ್ಚಿಸಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ದೂದಮಾಳ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ತುಳಸಿದಾಸ ವೇಳಿಪ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಜಾರಕುಣಂಗ ಗ್ರಾಮ ಪಂಚಾಯತ ಸದಸ್ಯರಾದ ದೇವಿದಾಸ ಮಿರಾಶಿ,ಶಶಿಕಾಂತ ಕಾಂಬ್ಳೆ,ಉಪಾಧ್ಯಕ್ಷರು ತಾಲೂಕಾ ಶಿಕ್ಷಕರ ಸಂಘ ಜೋಯಿಡಾ, ಶ್ರೀಕಾಂತ ನಾಯ್ಕ ಹಿರಿಯ ಶಿಕ್ಷಕರು, ಗ್ರಾಮದ ಮಿರಾಶಿಗಳು, ಶಾಲೆಯ ಎಸ್ ಡಿ ಎಂ ಸಿ ಉಪಾಧ್ಯಕ್ಷರು,ಸರ್ವ ಸದಸ್ಯರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಲಿಕಾ ಹಬ್ಬದ ಸ್ಪರ್ಧೆಯಲ್ಲಿ 1ರಿಂದ 3 ನೇಯ ತರಗತಿಯವರಿಗೆ ಪೋಷಕರೊಂದಿಗೆ ಮೋಜಿನ ಆಟ,ಕಥೆ ಹೇಳುವುದು,ಗಟ್ಟಿಯಾಗಿ ಓದುವುದು ಸ್ಪರ್ಧೆಗಳು. 4 ರಿಂದ 5 ನೇಯ ತರಗತಿಯವರಿಗೆ ಸಂತೋಷದಾಯಕ ಗಣಿತ,ಆರೋಗ್ಯ ಮತ್ತು ಪೌಷ್ಟಿಕಾಂಶ,ಕೈ ಬರಹ ಸ್ಪರ್ಧೆಗಳಲ್ಲಿ ಕ್ಯಾಸಲರಾಕ್ ಕ್ಲಸ್ಟರಿನ ಶಾಲೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಸ್ಪರ್ಧೆಯ ನಿರ್ಣಾಯಕರಾಗಿ ಕ್ಯಾಸಲರಾಕ್ ಕ್ಲಸ್ಟರಿನ ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷಕರು ಅತ್ತ್ಯುತ್ತಮ ಸಹಕಾರ ನೀಡಿದರು.

ವೇದಿಕೆಯ ಮೇಲಿನ ಗಣ್ಯರು ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ,ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಅಭಿನಂದನಾ ಪತ್ರ ವಿತರಿಸಲಾಯಿತು. ಮಧ್ಯಾಹ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರಿಗೆ,ಕ್ಯಾಸಲ ರಾಕ್ ಕ್ಲಸ್ಟರಿನ ಮುಖ್ಯ ಶಿಕ್ಷಕರು,ಸಹ ಶಿಕ್ಷಕರು, ನಿರ್ಣಾಯಕರಿಗೆ,ವಿದ್ಯಾರ್ಥಿಗಳಿಗೆ ಎಲ್ಲರಿಗೂ ಅಚ್ಚುಕಟ್ಟಾದ ಶುಚಿ-ರುಚಿಯಾದ ಊಟದ ವ್ಯವಸ್ಥೆಯನ್ನು ದೂದಮಳಾ ಶಾಲಾ ಶಿಕ್ಷಕರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು,ಪಾಲಕರ,ಪೋಷಕರ ಸಹಕಾರದಲ್ಲಿ ಮಾಡಿದ್ದರು. ದೂದಮಾಳ ಶಾಲೆಯ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು ಎಸ್ ಡಿ ಎಂ ಸಿ,ಹಳೆ ವಿದ್ಯಾರ್ಥಿಗಳ ಸಂಘ,ಶಿಕ್ಷಕ ವೃಂದ,ವಿದ್ಯಾರ್ಥಿ ವೃಂದ ಸರಕಾರಿ ಹಿರಿಯ ಪ್ರಾಥಮಿಕ ದೂದಮಳಾ ಶಾಲೆ,ಸಮೂಹ ಸಂಪನ್ಮೂಲ ವ್ಯಕ್ತಿಗಳು,ಕ್ಯಾಸಲರಾಕ್ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು,ಸಹ ಶಿಕ್ಷಕ ವೃಂದದವರು,ಸಮಸ್ತ ವಿದ್ಯಾರ್ಥಿ ವೃಂದದವರು ಯಶಸ್ಸಿನ ಕಾರ್ಯಕ್ರಮಕ್ಕೆ ಅತ್ತ್ಯುತ್ತಮ ಸಹಕಾರ ನೀಡಿದರು. ಕಲಿಕಾ ಹಬ್ಬದ ಕಾರ್ಯಕ್ರಮವನ್ನು ಶಿಕ್ಷಕರಾದ ಮಲ್ಲಿಕಾರ್ಜುನ ಭೂಸರೆಡ್ಡಿ ಅತ್ಯುತ್ತಮವಾಗಿ ನಿರೂಪಿಸಿದರು.ಕೊನೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷ,ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಡಿಗ್ಗಿ ಶಾಲೆಯ ಮುಖ್ಯ ಶಿಕ್ಷಕರಾದ ಪ್ರಸನ್ನ ಹೆಚ್ ವಂದನಾರ್ಪಣೆ ಸಲ್ಲಿಸಿದರು.